×
Ad

ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಕಪಿಲ್ ಶರ್ಮ

Update: 2016-10-17 15:11 IST

     ಮುಂಬೈ, ಅ.17: ವರ್ಸೋವಾದಲ್ಲಿರುವ ತನ್ನ ಕಚೇರಿಯ ಕೆಲವು ಭಾಗ ನೆಲಸಮಗೊಳಿಸಲು ಆದೇಶಿಸಿ ನೋಟಿಸ್ ಜಾರಿ ಮಾಡಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ) ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಲು ಹಿಂದಿಯ ಖ್ಯಾತ ಕಿರುತೆರೆ ಹಾಸ್ಯನಟ ಕಪಿಲ್ ಶರ್ಮ ನಿರ್ಧರಿಸಿದ್ದಾರೆ.

     ನಾನು ಕಳೆದ 5 ವರ್ಷಗಳಿಂದ 15 ಕೋಟಿ ರೂ. ತೆರಿಗೆ ಪಾವತಿಸಿದ್ದೇನೆ. ಆದಾಗ್ಯೂ, ಮುಂಬೈನಲ್ಲಿ ತನ್ನ ಕಚೇರಿ ನಿರ್ಮಿಸಲು ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು 5 ಲಕ್ಷ ರೂ. ಲಂಚ ನೀಡಬೇಕಾಗಿದೆ. ಇದು ಒಳ್ಳೆಯ ದಿನವೇ(ಯೇ ಹೈ ಅಚ್ಛೆ ದಿನ್?) ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಟ್ವೀಟರ್‌ನ ಮೂಲಕ ಪ್ರಶ್ನಿಸುವ ಮೂಲಕ ಕಪಿಲ್ ಈ ಹಿಂದೆ ಸುದ್ದಿಯಾಗಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಂಸಿ,‘‘ಕಪಿಲ್ ಶರ್ಮ ಅವರು ಅಂಧೇರಿ-ವರ್ಸೋವಾದಲ್ಲಿ ಪರಿಸರದ ಮರ-ಗಿಡಗಳನ್ನು ನಾಶ ಮಾಡಿ ಅನಧಿಕೃತವಾಗಿ ಬಂಗ್ಲೆಗಳನ್ನು ಕಟ್ಟುತ್ತಿದ್ದಾರೆ. ಒಶಿವಾರದಲ್ಲಿರುವ ತನ್ನ ಫ್ಲಾಟ್‌ನ್ನು ಅನುಮತಿ ಪಡೆಯದೇ ಕಟ್ಟಡವನ್ನು ಎತ್ತರಕ್ಕೆ ಏರಿಸಿದ್ದಾರೆ. ಆಗಸ್ಟ್‌ನಲ್ಲಿ ಅಂಧೇರಿಯಲ್ಲಿ ಕಪಿಲ್ ನಿರ್ಮಿಸಿದ್ದ ಅನಧಿಕೃತ ಕಟ್ಟಡವನ್ನು ಬಿಎಂಸಿ ನೆಲಸಮ ಮಾಡಿದೆ. ಈ ಕೋಪಕ್ಕೆ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿತ್ತು. ಬಿಎಂಸಿ ಆರೋಪದಿಂದ ಸಮಸ್ಯೆಗೆ ಸಿಲುಕಿರುವ ಕಪಿಲ್ ಶರ್ಮ ಎಲ್ಲ ಕಾನೂನು ಜಂಜಾಟದಿಂದ ಮುಕ್ತವಾಗಲು ಬಾಂಬೆ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಆದರೆ, ಕಪಿಲ್ ತನ್ನ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಅರ್ಜಿ ಸಲ್ಲಿಸುತ್ತಾರೊ, ತನ್ನ ಕಚೇರಿ ಕಟ್ಟಡವನ್ನ್ನು ಅಕ್ರಮ ಎಂಬ ನೆಲೆಯಲ್ಲಿ ನೆಲಸಮ ಮಾಡಲು ಮುಂದಾಗಿರುವ ಬಿಎಂಸಿ ಆದೇಶಕ್ಕೆ ತಡೆ ಹೇರುವಂತೆ ಅರ್ಜಿ ಸಲ್ಲಿಸುತ್ತಾರೊ ಎಂದು ಇನ್ನೂ ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News