ಕೋಟಿ ಚೆನ್ನಯ ಸಾನಿಧ್ಯ ಜೀರ್ಣೋದ್ಧಾರ ಕುರಿತು ಪೂರ್ವಭಾವಿ ಸಭೆ
ಪುತ್ತೂರು, ಅ.17: ಕೋಟಿ ಚೆನ್ನಯರ ವಿಚಾರದಲ್ಲಿ ಜಾತಿ ಧರ್ಮ ಮತಭೇದವಿಲ್ಲ. ರಾಜಕೀಯವೂ ಇಲ್ಲ ಎಂದು ಮಾಜಿ ಶಾಸಕ ರುಕ್ಮಯ ಪೂಜಾರಿ ಹೇಳಿದರು.
ಅವರು ಕೋಟಿ ಚೆನ್ನಯರ ಜನ್ಮಸ್ಥಳವಾದ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಡಿ.17 ಮತ್ತು 18ರಂದು ನಡೆಯಲಿರುವ ಪ್ರಾಯಶ್ಚಿತ ಪರಿಹಾರ ಕಾರ್ಯಕ್ರಮಗಳ ಕುರಿತು ಪೂರ್ವಭಾವಿಯಾಗಿ ರವಿವಾರ ಪಡುಮಲೆಯ ಬಲ್ಲಾಳರ ಚಾವಡಿಯಲ್ಲಿ ನಡೆದ ಸಮಾಲೋಚನಾ ಸಬೆಯಲ್ಲಿ ಮಾತನಾಡಿದರು.
ಕೋಟಿ ಚೆನ್ನಯರು ಆರಾಧಿಸಿಕೊಂಡು ಬಂದಿದ್ದ, ಪಡುಮಲೆ ಕ್ಷೇತ್ರದ ಕಾರಣಿಕ ಸಾನಿಧ್ಯವೂ ಆಗಿರುವ ನಾಗಬ್ರಹ್ಮ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯ ಮೊದಲು ಆಗಬೇಕಿದೆ. ನಾಗಬ್ರಹ್ಮ ಸಾನಿಧ್ಯದ ಜೀರ್ಣೋದ್ಧಾರಕ್ಕೆ ಮುನ್ನ ನಾಗಬ್ರಹ್ಮನ ಕೈಯಲ್ಲಿರುವ ಬುದ್ಧಿವಂತನಿಗೆ ಮೋಕ್ಷ ಮಾಡಬೇಕಾಗಿದೆ. ಈ ಪ್ರಾಯಶ್ಚಿತ ಕಾರ್ಯಕ್ರಮಗಳನ್ನು ನಡೆಸದ ಹೊರತು ಪಡುಮಲೆ ಅಭಿವೃದ್ಧಿ ವಿಚಾರದಲ್ಲಿನ ಗೊಂದಲ ಬಗೆಹರಿಯುವುದಿಲ್ಲ ಎಂದ ಅವರು ಈ ನಿಟ್ಟಿನಲ್ಲಿ ಪ್ರಾಯಶ್ಚಿತ ಪರಿಹಾರೋಪಾದಿ ಕಾರ್ಯಕ್ರಮಗಳು ಡಿ.17 ಮತ್ತು 18ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಪೂರ್ತಿ ಜವಾಬ್ದಾರಿಯನ್ನು ಊರವರೇ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಿಲ್ಲವ ಮಹಾಮಂಡಲದ ಮುಖಂಡ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ತುಳುನಾಡಿನ ಐತಿಹಾಸಿಕ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾದವರಲ್ಲ. ಪ್ರತೀ ಧರ್ಮದಲ್ಲಿಯೂ ಕೋಟಿ ಚೆನ್ನಯರ ಆರಾಧಕರಿದ್ದಾರೆ. ತುಳುನಾಡಿನ ಎಲ್ಲಡೆ ಕೋಟಿ ಚೆನ್ನಯರನ್ನು ಗರಡಿಗಳ ಮೂಲಕ ಆರಾಧಿಸಲಾಗುತ್ತಿದೆ. ಆದರೆ ಭಯಮಿಶ್ರಿತ ನಂಬಿಕೆಯಿಂದಾಗಿ ಕೋಟಿ ಚೆನ್ನಯರು ಹುಟ್ಟಿದ ಸ್ಥಳದಲ್ಲಿ ಈ ತನಕ ಗರಡಿಯಾಗಿಲ್ಲ. ಜನ್ಮ ಕ್ಷೇತ್ರದ ಉದ್ಧಾರವೂ ಆಗಿಲ್ಲ. ಆದರೆ ಇದೀಗ ಕೋಟಿ ಚೆನ್ನಯರ ಜನ್ಮಸ್ಥಳದ ಅಭಿವೃದ್ಧಿಗೆ ಮತ್ತು ಮೂಲ ಗರಡಿ ರಚನೆಗೆ ಪೂರಕ ವಾತಾವರಣ ಸೃಷ್ಠಿಯಾಗುವುದರೊಂದಿಗೆ ಕಾಲ ಕೂಡಿ ಬಂದಿದೆ. ದೇಶ ವಿದೇಶಗಳಲ್ಲಿಯೂ ಕೋಟಿ ಚೆನ್ನಯರ ಬಹಳಷ್ಟು ಮಂದಿ ಆರಾಧಕರಿದ್ದಾರೆ. ಪಡುಮಲೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾದಲ್ಲಿ ಅದೊಂದು ಐತಿಹಾಸಿಕ ಚರಿತ್ರೆಯಾಗಲಿದೆ. ತಿರುಮಲ, ಶಬರಿಮಲೆಯಂತೆ ಪಡುಮಲೆಯೂ ಹೆಸರುವಾಸಿ ಕ್ಷೇತ್ರವಾಗಲಿದೆ. ಇದೊಂದು ಸರ್ವ ಧರ್ಮೀಯರ ಈ ಕ್ಷೇತ್ರವಾಗಲಿದ್ದು, ಇದಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಜಾತಿ-ಧರ್ಮ ಮರೆತು ಇದು ನಮ್ಮ ಕಾರ್ಯಕ್ರಮ ಎಂಬ ನೆಲೆಯಲ್ಲಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇರುವುದರಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಮುಖ್ಯ ಸಂಚಾಲಕರಾಗಿ ಮನೋಜ್ ರೈ ಪೇರಾಲು ಅವರನ್ನು ಆಯ್ಕೆ ಮಾಡಲಾಯಿತು. ಪೂರ್ವಭಾವಿ ಸಭೆಗೆ ಆಗಮಿಸಿದ್ದ ನಾಗಬ್ರಹ್ಮ ಸಾನಿಧ್ಯವಿರುವ ಜಾಗದ ಪಾಲುದಾರರಾದ ಮೇಘನಾಥ ರೈ ಮತ್ತು ಅವರ ಸಹೋದರನ ಪುತ್ರ ಅವರು ನಾಗಬ್ರಹ್ಮ ಸಾನಿಧ್ಯವಿರುವ ಸ್ಥಳವನ್ನು ಟ್ರಸ್ಟ್ ಹೆಸರಿಗೆ ಬರೆದುಕೊಡುವುದಾಗಿ ಘೋಷಿಸಿದರು. ಅಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ತಮ್ಮಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು.
ಯೋಗೀಶ್ ಕುಮಾರ್ ಬೆಳ್ತಂಗಡಿ, ಬಾಲಚಂದ್ರ ರೈ ಬೆಳ್ಳಿಪ್ಪಾಡಿ, ರತ್ನಾಕರ ಸುವರ್ಣ, ಶೇಖರ್ ನಾರಾವಿ, ಶ್ರೀಧರ್ ಪಟ್ಲ, ವಿಷ್ಣು ಭಟ್, ರೋಹಿನಾಥ್ ಪಾರೆ ಬಂಟ್ವಾಳ, ಸಂಜೀವ ಪೂಜಾರಿ ಕೂರೇಲು, ರಾಮಣ್ಣ ಗೌಡ , ಮುಕುಂದ ಎಂ.ಎಸ್., ಚರಣ್ ಬೆಳ್ತಂಗಡಿ, ಡೀಕಯ್ಯ ಪೆರ್ವೋಡಿ, ಮನೋಜ್ ರೈ ಪೇರಾಲು, ರತನ್‌ಕುಮಾರ್ ಕರ್ನೂರು, ಹರೀಶ್ ಕುಮಾರ್,ವೇದನಾಥ ಸುವರ್ಣ, ರವಿರಾಜ್ ರೈ ಸಜಂಕಾಡಿ, ಶೈಲೇಶ್ ಕುಮಾರ್ ಬೆಳ್ತಂಗಡಿ, ರಾಜೇಶ್ ಶೆಟ್ಟಿ ಕೊಂಬೆಟ್ಟು, ಜಿ.ಕೆ.ಸುವರ್ಣ, ನೇಮಾಕ್ಷ ಸುವರ್ಣ, ಸುಬ್ಬಯ್ಯ ರೈ ಪೆಲತ್ತಡಿ, ಉದಯಕುಮಾರ್, ಗುರುಪ್ರಸಾದ್ ರೈ ಕುದ್ಕಾಡಿ, ಮನ್ವಿತ್ ರೈ ಕುಡ್ಕಾಡಿ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ ಮತ್ತಿತರರು ಉಪಸ್ಥಿತರಿದ್ದರು.