ಗಲಭೆ ಸೃಷ್ಟಿಸಲು ಸಂಘಪರಿವಾರದಿಂದ ಷಡ್ಯಂತ್ರ : ಪಿಎಫ್‌ಐ ಆರೋಪ
ಸುಳ್ಯ, ಅ.17: ಸುಳ್ಯದಲ್ಲಿ ಸಂಘ ಪರಿವಾರದವರಿಂದ ಗಲಭೆಗೆ ಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾದ ಪುತ್ತೂರು ಜಿಲ್ಲಾ ಘಟಕ ಮುಂಜಾಗರೂಕತೆ ವಹಿಸುವಂತೆ ಸರಕಾರವನ್ನು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಎಫ್‌ಐ ಜಿಲ್ಲಾಧ್ಯಕ್ಷ ಸಂಶುದ್ದೀನ್, ಬಲಾತ್ಕಾರದ ಮತಾಂತರ ಎಂಬ ಸುಳ್ಳು ಆರೋಪ ಹೊರಿಸಿ ಪ್ರತಿಭಟನೆ ನಡೆಸುವ ಮೂಲಕ ಅಲ್ಪಸಂಖ್ಯಾತರ ಮೇಲೆ ಹಿಂದೂಗಳನ್ನು ಎತ್ತಿಕಟ್ಟಲು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಲಾಗಿತ್ತು. ಪ್ರತಿಭಟನೆ ಸಂದರ್ಭ ಬಲಾತ್ಕಾರವಾಗಿ ಅಂಗಡಿಗಳನ್ನು ಬಂದ್ ಮಾಡಿಸಿದ್ದಲ್ಲದೆ, ಗಾಂಧಿನಗರದಲ್ಲಿ ಕಲ್ಲುತೂರಾಟ ನಡೆದಿದ್ದು, ಇದನ್ನು ಪೊಲೀಸ್ ಇಲಾಖೆಯ ಗಮನಕ್ಕೂ ತರಲಾಗಿದೆ. ಪೈಚಾರು, ಅರಂಬೂರು, ಅಡ್ಕಾರುಗಳಲ್ಲಿ ಅಂಗಡಿಗಳಿಗೆ ಬೆಂಕಿ ಹಚ್ಚುವ ಕೃತ್ಯ ನಡೆದಿದೆ. ಬೆಂಗಳೂರಿಗೆ ಪ್ರಯಣಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಸುಳ್ಳು ಆರೋಪ ಹೊರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಾಕಿ ಕೋಮು ಗಲಭೆಗೆ ಯತ್ನಿಸಲಾಗಿತ್ತು ಎಂದವರು ಆರೋಪಿಸಿದರು.
ಸುಳ್ಯದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳು ಗಲಭೆ ನಡೆಸುವ ವ್ಯವಸ್ಥಿತ ಕಾರ್ಯತಂತ್ರವಾಗಿದೆ. ಇವೆಲ್ಲದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆ ಎಳೆದು, ದುಷ್ಕರ್ಮಿಗಳ ಮೇಲೆ ಕ್ರಮಕೈಗೊಳ್ಳಬೇಕು. ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕಾಗಿದೆ ಎಂದು ಪಿಎಫ್‌ಐ ಸುಳ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಕೆ.ಮುಸ್ತಫಾ ಹೇಳಿದರು.
ಸಮಿತಿ ಸದಸ್ಯರಾದ ಹಮೀದ್ ಪೆರಾಜೆ, ಇಕ್ಬಾಲ್ ಸುಳ್ಯ, ರಶೀದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.