ಕಟೀಲು ದೇವಳದ ಅರ್ಚಕರ ಮನೆ ದರೋಡೆ ಪ್ರಕರಣ:ಐವರ ಬಂಧನ

Update: 2016-10-17 14:18 GMT

ಮಂಗಳೂರು, ಅ.17: ಅಕ್ಟೋಬರ್ 4ರಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿದ್ದು, ಅವರ ಮಾಹಿತಿ ದೊರೆತಿದೆ. ಅವರನ್ನೂ ಶೀಘ್ರದಲ್ಲೇ ಬಂಧಿಸುವುದಾಗಿ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

ಆಯುಕ್ತರ ಕಚೇರಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಸೂತ್ರದಾರ ಬಿಜೈ ಕಾಪಿಕಾಡ್ ನಿವಾಸಿ ಸುಧೀಂದ್ರರಾವ್ ಎಚ್.ಕೆ. ಯಾನೆ ಸುಧೀಂದ್ರ (33) ಸಹಿತ ಎಕ್ಕಾರು ನಿವಾಸಿಗಳಾದ ಚಿದಾನಂದ (33), ಸೂರಜ್ ಕುಮಾರ್ (35), ಅಡ್ಯನಡ್ಕದ ಸುರೇಶ್ ಕುಮಾರ್ (40), ಎಕ್ಕಾರು ದುರ್ಗಾನಗರ ನಿವಾಸಿ ಸದಾಶಿವ ಶೆಟ್ಟಿ (49) ಎಂಬವರನ್ನು ಬಂಧಿಸಲಾಗಿದೆ ಎಂದರು.

ಬಂಧಿತರಿಂದ ಚಿನ್ನಾಭರಣಗಳನ್ನು ಮಾರಾಟ ಮಾಡಿದ ಹಣ 4.25 ಲಕ್ಷ ರೂ., 3.910 ಗ್ರಾಂ ತೂಕದ ಕಟೀಲು ದುರ್ಗಾಪರಮೇಶ್ವರಿ ದೇವರ ಭಾವಚಿತ್ರವಿರುವ ಒಂದು ಪೆಂಡೆಂಟ್, ಆರೋಪಿಗಳು ಬಳಸಿದ ಐದು ಮೊಬೈಲ್ ಫೋನ್‌ಗಳು, ಕೃತ್ಯಕ್ಕೆ ಬಳಸಿದ ಐ20 ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಚಂದ್ರಶೇಖರ್ ತಿಳಿಸಿದರು.

 ಪ್ರಕರಣದ ತನಿಖೆಗಾಗಿ ಪೊಲೀಸ್ ಅಧಿಕಾರಿಗಳ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಆರೋಪಿಗಳ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿದೆ. ಆರೋಪಿಗಳ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತೆಂಕ ಎಕ್ಕಾರು ಗ್ರಾಮದ ಹುಣ್ಣಿಕಟ್ಟೆ ಎಂಬಲ್ಲಿಗೆ ಹೋಗಿ ಅಲ್ಲಿ ಬಸ್ಸುನಿಲ್ದಾಣದ ಬಳಿಯಲ್ಲಿದ್ದ ಐ20 ಕಾರನ್ನು ಸುತ್ತುವರಿದು ಕಾರಿನಲ್ಲಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಸುನೀಲ್ ವೈ. ನಾಯಕ್ ಮತ್ತು ಸಿಬ್ಬಂದಿ ಹಾಗೂ ಬಜ್ಪೆ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಸಿಬ್ಬಂದಿ ಸಹಿತ ತಂಡದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಮಿಷನರ್ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಪ್ರಕರಣದಲ್ಲಿ ಇನ್ನೂ ಐವರು ಆರೋಪಿಗಳಿದ್ದು, ಅವರ ಮಾಹಿತಿ ದೊರೆತಿದೆ. ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಅವರು ತಿಳಿಸಿದರು.

ವಾಸುದೇವ ಆಸ್ರಣ್ಣ ರ ಪರಿಚಯಸ್ಥರ ಕೃತ್ಯ

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಧೀಂದ್ರರಾವ್ ಹಾಗೂ ಅರ್ಚಕ ವಾಸುದೇವ ಆಸ್ರಣ್ಣ ಅವರು ಪರಿಚಯಸ್ಥರಾಗಿದ್ದಾರಲ್ಲದೆ, ಸುಧೀಂದ್ರರಾವ್ ಕುಟುಂಬದ ಸದಸ್ಯರು ದೇವಸ್ಥಾನದ ಸಿಬ್ಬಂದಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುಧೀಂದ್ರರಾವ್ ದೇವಸ್ಥಾನದ ಪಿಆರ್‌ಒ ಆಗಿರುವ ಸುರೇಶ್ ಕುಮಾರ್‌ನ ಸಹಾಯದಿಂದ ಇತರ ಆರೋಪಿಗಳನ್ನು ಸೇರಿಸಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಕಮಿಷನರ್ ವಿವರಿಸಿದರು.

ಸುರೇಶ್ ಕುಮಾರ್ ವಾಸುದೇವ ಆಸ್ರಣ್ಣರ ಮನೆಯ ಒಳಗಡೆಯ ಕಲ್ಪನೆಯನ್ನು ಹೊಂದಿದ್ದು, ಈತನ ಸಹಿತ ಇತರ ಆರೋಪಿಗಳ ನೆರವಿನಿಂದ ಸುಧೀಂದ್ರರಾವ್ ಮಾರಕಾಯುಧ ಹಾಗೂ ರಿವಾಲ್ವರ್‌ಗಳೊಂದಿಗೆ ಸಜ್ಜಾಗಿ ಬಂದು ಕೃತ್ಯ ಎಸಗಿದ್ದಾನೆ. ಆರೋಪಿಗಳ ಪೈಕಿ ಕೆಲವರನ್ನು ಮನೆಯ ಮೇಲ್ಭಾಗಕ್ಕೆ ಕಳುಹಿಸಿ ಅಲ್ಲಿಂದ ಆರೋಪಿಗಳು ಮನೆಗೆ ಹೊಕ್ಕು, ವಾಸುದೇವ ಅಸ್ರಣ್ಣರ ಮಗ ಹಾಗೂ ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ಮನೆಯಿಂದ ಸುಮಾರು 80 ಪವನ್ ಚಿನ್ನಾಭರಣ, ನಗದು, ಮೂರು ಮೊಬೈಲ್ ಫೋನ್‌ಗಳನ್ನು ದರೋಡೆಗೈದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸಾಲ ಮಾಡಿಕೊಂಡಿದ್ದ ಆರೋಪಿ

ದರೋಡೆ ಪ್ರಕರಣದ ಪ್ರಮುಖ ಆರೋಪಿ ಸುಧೀಂದ್ರರಾವ್ ಉದ್ಯಮಿಯಾಗಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲದ ಮೊತ್ತ ಸಂದಾಯ ಮಾಡಲು ಸಾಧ್ಯವಾಗದೆ ದರೋಡೆಗೆ ಸಂಚು ರೂಪಿಸಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಕಮಿಷನರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News