ಕೃಷ್ಣಮಠ ಮುತ್ತಿಗೆ ತಡೆಯಲು ಸಿದ್ಧ: ಧರ್ಮ ಜಾಗೃತಿ ಸಮಿತಿ

Update: 2016-10-17 13:32 GMT

ಪುತ್ತೂರು, ಅ.17: ಸರಕಾರದ ಕುಮ್ಮಕ್ಕಿನಿಂದ ಅ.23ರಂದು ಉಡುಪಿ ಮಠಕ್ಕೆ ಮುತ್ತಿಗೆ ಹಾಕಲು ಬುದ್ಧಿಜೀವಿಗಳು ಮುಂದಾಗಿದ್ದು, ಇದನ್ನು ತಡೆಯಲು ನಾವು ಸಿದ್ದರಿದ್ದೇವೆ. ಆದರೆ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಸರಕಾರವೇ ಹೊಣೆಯಾಗಲಿದೆ ಎಂದು ಧರ್ಮ ಜಾಗೃತಿ ಸಮಿತಿಯ ದ.ಕ. ಜಿಲ್ಲಾ ಅಧ್ಯಕ್ಷ ರಾಜಾರಾಂ ಶೆಟ್ಟಿ ಕೋಲ್ಪೆಗುತ್ತು ತಿಳಿಸಿದ್ದಾರೆ.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರಕಾರವು ಹೊಸನಗರ, ಉಡುಪಿ ಸೇರಿದಂತೆ ಹಿಂದೂಗಳ ಧಾರ್ಮಿಕ ಕೇಂದ್ರಗಳ ವಿರುದ್ದ ಧೋರಣೆ ತಳೆಯುತ್ತಿರುವುದು ಖಂಡನೀಯವಾಗಿದ್ದು, ಉಡುಪಿ ಮಠವನ್ನು ಉಳಿಸಿಕೊಳ್ಳಲು ಹಿಂದೂ ಸಮಾಜ ಹೋರಾಟ ನಡೆಸಲಿದೆ ಎಂದರು.

ಸಮಿತಿಯ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಬುದ್ಧಿಜೀವಿಗಳ ಮುತ್ತಿಗೆ ಬೆದರಿಕೆಯಲ್ಲಿ ಸರಕಾರದ ಕುಮ್ಮಕ್ಕಿದೆ. ಕೃಷ್ಣ ಮಠ ಉಳಿಸುವ ನಿಟ್ಟಿನಲ್ಲಿ ಯಾವುದೇ ಸಂಘಟನೆಗಳು ನಡೆಸುವ ಎಲ್ಲಾ ಕಾರ್ಯಗಳಿಗೆ ನಾವು ಬೆಂಬಲ ನೀಡಲಿದ್ದೇವೆ ಎಂದರು.

ಸರಕಾರದ ಪ್ರತಿನಿಧಿಯಾಗಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ರಾಮ ಮತ್ತು ಕೃಷ್ಣ ಮಾಂಸಾಹಾರಿಗಳು ಎಂಬ ಹೇಳಿಕೆ ನೀಡುವ ಮೂಲಕ ಸಮಾಜದ ಶಾಂತಿಯನ್ನು ಕದಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಧರ್ಮ ಜಾಗೃತಿ ಸಮಿತಿ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಮುಖಂಡರಾದ ರಾಜೇಶ್ ಬನ್ನೂರು ಮತ್ತು ಚಿನ್ಮಯ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News