ಪುತ್ತೂರು ಸರಕಾರಿ ಆಸ್ಪತ್ರೆಗೆ ಶಾಸಕಿ, ಎಸಿ ದಿಢೀರ್ ಭೇಟಿ

Update: 2016-10-17 13:54 GMT

ಪುತ್ತೂರು, ಅ.17: ವೈದ್ಯರ ಕೊರತೆ, ಔಷಧಿ ಕೊರತೆ ಮೊದಲಾದ ಸಮಸ್ಯೆಗಳೊಂದಿಗೆ ಪುತ್ತೂರು ಸರಕಾರಿ ಆಸ್ಪತ್ರೆಯು ಅವ್ಯವಸ್ಥೆಯಿಂದ ಕೂಡಿರುವ ಹಿನ್ನೆಲೆಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೋಮವಾರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಸಭೆ ನಡೆಸಿ ಸಮಸ್ಯೆಗಳ ಕುರಿತು ವೈದ್ಯರೊಂದಿಗೆ ಸಮಾಲೋಚಿಸಿದರು.

ಕಳೆದ ಹಲವು ತಿಂಗಳಿನಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ವೈದ್ಯರ ಕೊರತೆ ಹಾಗೂ ಔಷಧಿಗಳ ಕೊರತೆಯಿಂದ ಸರಕಾರಿ ಆಸ್ಪತ್ರೆಯನ್ನೇ ನಂಬಿದವರಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಉಪವಿಬಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆಸ್ಪತ್ರೆಗೆ ಬೇಟಿ ನೀಡಿ ಸಭೆ ನಡೆಸಿ ಆಸ್ಪತ್ರೆಯ ಸಮಸ್ಯೆ, ಕಾರ್ಯನಿರ್ವಹಿಸುವ ಸಿಬ್ಬಂದಿ, ಅನುದಾನ, ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರದೀಪ್ ಮಾಹಿತಿ ನೀಡಿದರು. ಆಸ್ಪತ್ರೆ ಸಿಬ್ಬಂದಿಗಾಗಿ10 ಲಕ್ಷ ರೂ. ವೆಚ್ಚದ ತಾತ್ಕಾಲಿಕ ವಿಶ್ರಾಂತಿ ಭವನ, ಹೆಚ್ಚುವರಿ ಶುದ್ಧ ನೀರಿನ ವ್ಯವಸ್ಥೆ, ತಜ್ಞವೈದ್ಯ, ಪ್ರಸೂತಿ ತಜ್ಞ, ಸ್ತ್ರೀರೋಗ ತಜ್ಞರ ತುರ್ತು ನಿಯೋಜನೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಸರಕಾರದಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಜಿಲ್ಲಾ ವೈದ್ಯಾಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಡಾ.ಪ್ರದೀಪ್ ತಿಳಿಸಿದರು.

ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆಯಿರುವ ಕುರಿತು ವೈದ್ಯರು ತಿಳಿಸಿದಾಗ, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News