ದಲಿತ ಸಂಘಟನೆಯ ನೇತೃತ್ವದಲ್ಲಿ ಪುತ್ತೂರು ನಗರಸಭೆಗೆ ಮುತ್ತಿಗೆ

Update: 2016-10-17 14:10 GMT

ಪುತ್ತೂರು, ಅ.17: ಪುತ್ತೂರು ನಗರಸಭಾ ವ್ಯಾಪ್ತಿಯ ಪಡ್ನೂರು ಮತ್ತು ಬನ್ನೂರು ಗ್ರಾಮಕ್ಕೆ ಸಂಬಂಧಿಸಿದ ಗುರುಂಪುನಾರ್ ಕಾಲನಿಗೆ ರಸ್ತೆ ನಿರ್ಮಾಣ ಮಾಡುವ ಮೂಲಕ ಈ ಭಾಗದ ಜನತೆಯ ಮೂವತ್ತು ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ ಜಿಲ್ಲಾ ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಗುರುಂಪುನಾರ್ ವ್ಯಾಪ್ತಿಯ ಸಾರ್ವಜನಿಕರು ಸೋಮವಾರ ನಗರಸಭೆಗೆ ಮುತ್ತಿಗೆ ಹಾಕಿ ಧರಣಿ  ನಡೆಸಿದರು.

ನಗರಸಭೆಯ ಕಚೇರಿಯ ಎದುರು ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಗುರುಂಪುನಾರ್ ಪ್ರದೇಶಕ್ಕೆ ರಸ್ತೆ ನಿರ್ಮಿಸಿ ಕೊಡಬೇಕೆನ್ನುವುದು ಈ ಭಾಗದ ಜನತೆಯ ಮೂವತ್ತು ವರ್ಷಗಳ ಹಿಂದಿನ ಬೇಡಿಕೆಯಾಗಿದ್ದರೂ ಇನ್ನೂ ಈಡೇರಿಲ್ಲ. ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ರಾಜಕೀಯ ಮಾಡಿಕೊಂಡು ದಿನ ದೂಡುತ್ತಿದ್ದಾರೆಯೇ ಹೊರತು ರಸ್ತೆ ನಿರ್ಮಿಸಿಕೊಡಲು ಆಸಕ್ತಿ ತೋರುತ್ತಿಲ್ಲ. ಕಳೆದ ಎರಡು ವರ್ಷದ ಅವಧಿಯಲ್ಲಿ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಮೂರು ಬಾರಿ ಪ್ರತಿಭಟನೆ ನಡೆಸಲಾಗಿದ್ದರೂ ಈ ತನಕ ಏನೂ ಪ್ರಯೋಜನವಾಗಿಲ್ಲ. ಇದರ ಹಿಂದೆ ಷಡ್ಯಂತ್ರವಿದ್ದು, ಜನಪ್ರತಿನಿಧಿಗಳು ಭೂಮಾಲಕರೊಂದಿಗೆ ಹಣಕಾಸಿನ ವ್ಯವಹಾರ ನಡೆಸಿರುವ ಶಂಕೆ ಇದೆ ಎಂದು ಆರೋಪಿಸಿದರು.

ದಲಿತ್ ಸೇವಾ ಸಮಿತಿಯ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಗಿರಿಧರ್ ನಾಕ್ ಮಾತನಾಡಿ, ಈ ರಸ್ತೆ ವಿಚಾರದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದು, ನಗರಸಭೆಯ ಆಯುಕ್ತರಿಗೆ ಈ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯೇ ಮಾಯವಾಗಿದೆ ಎಂದು ಆರೋಪಿಸಿದರು. ರಸ್ತೆ ನಿರ್ಮಾಣವಾಗದಿದ್ದರೆ ನಾವು ಬಿಡುವುದಿಲ್ಲ. ಇದು ನಮ್ಮ ಅಚಲ ನಿರ್ಧಾರ ಎಂದು ಅವರು ಎಚ್ಚರಿಸಿದರು.

ಪೂರ್ವಾಹ್ನ 11 ಗಂಟೆ ವೇಳೆಗೆ ದಲಿತ ಸೇವಾ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಗುರುಂಪುನಾರ್ ಪ್ರದೇಶದ ನಾಗರಿಕರು ನಗರಸಭೆಯ ಮುಂಭಾಗದಲ್ಲಿ ಜಮಾಯಿಸಿ ಧರಣಿ ಆರಂಭಿಸಿದ್ದರು. ಕೆಲ ಗಂಟೆಗಳು ಕಳೆದರೂ ನಗರಸಭೆಯ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಲು ಮುಂದೆ ಬರಲಿಲ್ಲ. ಈ ನಡುವೆ ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಧರಣಿನಿರತರ ಕಣ್ತಪ್ಪಿಸಿ ಹಿಂಬಾಗಿಲ ಮೂಲಕ ಕಚೇರಿಯಿಂದ ಹೊರನಡೆದುದನ್ನು ಗಮನಿಸಿದ ಧರಣಿನಿರತರು ಒಮ್ಮೆಲೆ ನಗರಸಭೆಯೊಳಗೆ ಪ್ರವೇಶಿಸಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತುಸು ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ತಕ್ಷಣ ಪೊಲೀಸರು ತಡೆದು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಧರಣಿಯ ಕಾವು ಏರಿದ ಹಿನ್ನೆಲೆಯಲ್ಲಿ ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು ಪೊಲೀಸ್ ರಕ್ಷಣೆ ಕೋರಿದ್ದರು. ನಂತರ ಪೊಲೀಸ್ ಬಂದೋಬಸ್ತಿನಲ್ಲಿ ಧರಣಿನಿರತರ ಬಳಿಗೆ ತೆರಳಿ ಅವರೊಂದಿಗೆ ಸಮಸ್ಯೆಯ ಕುರಿತು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯ ಎಚ್.ಮುಹಮ್ಮದ್ ಅಲಿ ಇದ್ದರು.

ಮಾತುಕತೆಯ ವೇಳೆ ಧರಣಿನಿರತರು ಗುರುಂಪುನಾರ್ ಪ್ರದೇಶಕ್ಕೆ ರಸ್ತೆ ನಿರ್ಮಾಣ ಮಾಡುವ ತನಕ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಅಲ್ಲದೆ ಇಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಪಟ್ಟು ಹಿಡಿದರು. ಅದರಂತೆ ಪುರಸಭಾಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯ ಮುಹಮ್ಮದ್ ಅಲಿ, ಆಯುಕ್ತೆ ರೂಪಾ ಶೆಟ್ಟಿ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರೊಂದಿಗೆ ಗುರುಂಪುನಾರ್ ಪ್ರದೇಶಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳ ಪರಿಶೀಲಿಸಿದ ಬಳಿಕ ಧರಣಿನಿರತರ ಮನವೊಲಿಸಿದ ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು ಮತ್ತು ಸದಸ್ಯ ಮುಹಮ್ಮದ್ ಅಲಿ, ಬುಧವಾರ ಪುತ್ತೂರು ನಗರಸಭೆಯ ಕಚೇರಿಯಲ್ಲಿ ರಸ್ತೆಗೆ ಸಂಬಂಧಿಸಿದ ಜಾಗದ ಮಾಲಕರೊಂದಿಗೆ ಸಭೆ ನಡೆಸಿ ರಸ್ತೆ ನಿರ್ಮಾಣದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂದೆಗೆದುಕೊಳ್ಳಲಾಯಿತು.

ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಮಾಜಿ ಗೌರವಾಧ್ಯಕ್ಷ ದಾಮೋದರ್ ಮುರ, ಸದಸ್ಯರಾದ ಸುರೇಂದ್ರ ನಾಯ್ಕೆ ಪಡ್ಡಾಯೂರು, ಸತೀಶ್ ಕೆ. ಕೃಷ್ಣನಗರ, ಸ್ಥಳೀಯ ನಿವಾಸಿ ಕೇಶವ ಗುರುಂಪುನಾರ್ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News