ಯಶಸ್ವಿಯಾಗಿ ಬಾಹ್ಯಾಕಾಶ ತಲುಪಿದ ಚೀನಾ ಗಗನಯಾತ್ರಿಗಳು
ಬೀಜಿಂಗ್, ಅ. 17: ಚೀನಾ ಇಂದು ಯಶಸ್ವಿಯಾಗಿ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಅವರು ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಒಂದು ತಿಂಗಳ ಕಾಲ ಭೂಮಿಗೆ ಸುತ್ತು ಬರಲಿದ್ದಾರೆ.
2022ರ ವೇಳೆಗೆ ಖಾಯಂ ಮಾನವಸಹಿತ ಬಾಹ್ಯಾಕಾಶ ನಿಲ್ದಾಣವೊಂದನ್ನು ಸ್ಥಾಪಿಸುವ ಚೀನಾದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.
50 ವರ್ಷದ ಜಿಂಗ್ ಹೈಪೆಂಗ್ ಮತ್ತು 37 ವರ್ಷದ ಚೆನ್ ಡಾಂಗ್ ಉತ್ತರ ಚೀನಾದ ಜಿಯುಕಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ‘ಶೆನ್‌ಝೂ-11’ ಬಾಹ್ಯಾಕಾಶ ನೌಕೆಯಲ್ಲಿ ಸ್ಥಳೀಯ ಸಮಯ ಬೆಳಗ್ಗಿನ 7:30 (ಭಾರತೀಯ ಸಮಯ ಮುಂಜಾನೆ 5 ಗಂಟೆ)ಕ್ಕೆ ಗಗನಕ್ಕೆ ಹಾರಿದರು.
ಅವರು ಈಗಾಗಲೇ ಬಾಹ್ಯಾಕಾಶದಲ್ಲಿರುವ ಪ್ರಾಯೋಗಿಕ ‘ಟಿಯಾಂಗಾಂಗ್ 2’ ಪ್ರಯೋಗಾಲಯವನ್ನು ತಲುಪಿ 30 ದಿನಗಳ ಕಾಲ ಭೂಮಿಗೆ ಪ್ರದಕ್ಷಿಣೆ ಬರಲಿದ್ದಾರೆ. ಇದು ಬಾಹ್ಯಾಕಾಶದಲ್ಲಿ ಚೀನಾದ ಗಗನಯಾತ್ರಿಗಳು ಕಳೆಯುವ ಅತಿ ದೀರ್ಘ ಸಮಯವಾಗಿರುತ್ತದೆ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಇಂಜಿನಿಯರಿಂಗ್ ಕಚೇರಿಯ ಉಪ ನಿರ್ದೇಶಕ ವು ಪಿಂಗ್ ತಿಳಿಸಿದರು.
ಇದು ಹಾಗೂ ಹಿಂದಿನ ಉಡಾವಣೆಗಳನ್ನು ಚಂದ್ರ ಅಥವಾ ಮಂಗಳನಲ್ಲಿಗೆ ಹೋಗುವ ಸಂಭಾವ್ಯ ಮಾನವ ಯಾನದ ಆರಂಭಿಕ ಮಜಲುಗಳನ್ನಾಗಿ ಪರಿಗಣಿಸಲಾಗಿದೆ.
‘ಶೆನ್‌ಝೂ-11’ ಬಾಹ್ಯಾಕಾಶ ನೌಕೆಯನ್ನು ‘ಲಾಂಗ್ ಮಾರ್ಚ್-2ಎಫ್’ ರಾಕೆಟ್ ಭೂಕಕ್ಷೆಯಲ್ಲಿರಿಸಿತು ಎಂದು ಸರಕಾರಿ ಒಡೆತನದ ಚೀನಾ ಸೆಂಟ್ರಲ್ ಟೆಲಿವಿಶನ್ (ಸಿಸಿಟಿವಿ) ನೇರಪ್ರಸಾರದಲ್ಲಿ ತಿಳಿಸಿತು.
ತಮ್ಮ ಬಾಹ್ಯಾಕಾಶ ಯಾನದ ವೇಳೆ, ಉಭಯ ಗಗನಯಾತ್ರಿಗಳು ಬಾಹ್ಯಾಕಾಶ ನೌಕೆ ಸಂಬಂಧಿತ ತಂತ್ರಜ್ಞಾನಗಳ ಪರೀಕ್ಷೆ ಮತ್ತು ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಪ್ರಯೋಗಗಳನ್ನು ನಡೆಸಲಿದ್ದಾರೆ.