ಮರಳು ಸಮಸ್ಯೆಯ ಹಿಂದೆ ಪ್ರಮೋದ್ ಕೈವಾಡದ ಶಂಕೆ: ಮಾಜಿ ಶಾಸಕ ರಘುಪತಿ ಭಟ್ ಆರೋಪ

Update: 2016-10-17 14:44 GMT

ಉಡುಪಿ, ಅ.17: ಸಿಆರ್‌ಝೆಡ್ ವ್ಯಾಪ್ತಿಯ ಮರಳುಗಾರಿಕೆಗೆ ಚೈನ್ನೈ ಹಸಿರು ಪೀಠ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿಫಲರಾಗಿದ್ದು, ಈ ಸಮಸ್ಯೆ ಸೃಷ್ಠಿಯ ಹಿಂದೆ ಸಚಿವರು ಭಾಗಿಯಾಗಿದ್ದಾರೆಂಬ ಸಂಶಯ ಮೂಡುತ್ತಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿರು ಪೀಠದಲ್ಲಿ ತಡೆಯಾಜ್ಞೆ ತಂದಿರುವ ಉದಯ ಸುವರ್ಣ ಎಂಬವರು ಸಚಿವ ಪ್ರಮೋದ್ ಮಧ್ವರಾಜ್ ಅವರ ಕಾರ್ಖಾನೆಯ ಉದ್ಯೋಗಿಯಾಗಿದ್ದಾರೆ. ಅವರನ್ನು ಮನವೊಲಿಸಿ ಪ್ರಕರಣ ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡುವ ಶಕ್ತಿ ಸಚಿವರಿಗೆ ಇಲ್ಲವೇ ಅಥವಾ ಇದರ ಹಿಂದೆ ಅವರು ಭಾಗಿಯಾಗಿದ್ದಾರೆಯೇ ಎಂದವರು ಪ್ರಶ್ನಿಸಿದರು.

ಈ ತಿಂಗಳ ಕೊನೆಯ ಒಳಗೆ ಮರಳುಗಾರಿಕೆ ಸಂಬಂಧಿಸಿ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಂಡು ಮರಳಿನ ಸಮಸ್ಯೆ ಬಗೆಹರಿಸದಿದ್ದರೆ ಬಿಜೆಪಿ ಕಾರ್ಯಕರ್ತರು ಸಾಂಪ್ರದಾಯಿಕ ಮರಳುಗಾರಿಕೆಯ ಮೂಲಕ ಮರಳನ್ನು ತೆಗೆದು ಮನೆ ನಿರ್ಮಿಸುತ್ತಿರುವ ಬಡವರಿಗೆ ನೀಡಲಾಗುವುದು. ಹೀಗೆ ನಾವೇ ಕಾನೂನನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಬರಬಹುದು ಎಂದರು.

ನಾಡದೋಣಿಗಳಿಗೆ ಸೆಪ್ಟಂಬರ್‌ನಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು 217ಲೀಟರ್ ಸೀಮೆಎಣ್ಣೆಯನ್ನು ಸಬ್ಸಿಡಿ ದರದಲ್ಲಿ ಸರಕಾರ ನೀಡುತ್ತಿದ್ದು, ಈ ವರ್ಷದ ಸೀಮೆಎಣ್ಣೆಯನ್ನು ಈವರೆಗೆ ಒದಗಿಸಿಲ್ಲ. ಇದರಿಂದ ಇದನ್ನೆ ನಂಬಿಕೊಂಡಿರುವ 1,300 ನಾಡದೋಣಿ ಮೀನುಗಾರರು ಸಮಸ್ಯೆ ಎದುರಿ ಸುತ್ತಿದ್ದಾರೆ. ಈವರೆಗೆ ಸೀಮೆಎಣ್ಣೆಯನ್ನು ಒದಗಿಸುವಲ್ಲಿ ಮೀನುಗಾರಿಕಾ ಸಚಿವರಾಗಿರುವ ಪ್ರಮೋದ್ ವಿಫಲವಾಗಿದ್ದಾರೆಂದು ಅವರು ದೂರಿದರು.

 ಶ್ರೀಕೃಷ್ಣ, ಶ್ರೀರಾಮ ಮಾಂಸಾಹಾರಿಗಳು ಎಂಬ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ ಆಕ್ಷೇಪಾರ್ಹ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಹಿಂದೂ ದೇವರ ಬಗ್ಗೆ ಈ ರೀತಿ ಹೇಳುವ ಮೂಲಕ ಅನಾವಶ್ಯಕ ವಿವಾದ ಸೃಷ್ಠಿಸುತ್ತಿದ್ದಾರೆ. ಇವರು ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಚೈತ್ರಾ ಆತ್ಮಹತ್ಯೆ ಬಗ್ಗೆ ಸಾಕಷ್ಟು ಸಂಶಯಗಳಿದ್ದು, ಈ ಕುರಿತ ತನಿಖೆಯನ್ನು ಚುರುಕುಗೊಳಿಸಬೇಕು. ಆಕೆ ಸಾಯುವ ಸಂದರ್ಭ ಅಪ್ರಾಪ್ತೆಯಾಗಿರುವುದರಿಂದ ಪ್ರಕರಣವನ್ನು ಪೊಕ್ಸೊ ಕಾಯ್ದೆಯಡಿ ದಾಖಲಿಸಬೇಕು. ಸಚಿವ ಪ್ರಮೋದ್ ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಆದುದರಿಂದ ಪ್ರಕರಣವನ್ನು ಐಪಿಎಸ್ ಮಟ್ಟ ಅಧಿಕಾರಿಗಳ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಉಪೇಂದ್ರ ನಾಯಕ್, ಅಕ್ಷತ್ ಶೆಟ್ಟಿ, ಪ್ರಭಾಕರ ಪೂಜಾರಿ, ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News