ಡಾ.ಮಂಜುನಾಥ್ ಭಂಡಾರಿಯವರಿಗೆ ಪ್ರಸಿದ್ಧ ಇಂಜಿನಿಯರ್ ಪ್ರಶಸ್ತಿ

Update: 2016-10-17 14:57 GMT

ಮಂಗಳೂರು, ಅ. 17: ಭಾರತೀಯ ಇಂಜಿನಿಯರ್‌ಗಳ ಸಂಸ್ಥೆಯ ಕರ್ನಾಟಕ ರಾಜ್ಯ ಕೇಂದ್ರವು ನೀಡುವ ಪ್ರಸಿದ್ಧ ಇಂಜಿನಿಯರ್ 2016ನೆ ಸಾಲಿನ ಪ್ರಶಸ್ತಿಗೆ ಭಂಡಾರಿ ಫೌಂಡೇಷನ್ ಮುಖ್ಯಸ್ಥ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮಂಜುನಾಥ್ ಭಂಡಾರಿ ಆಯ್ಕೆಯಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಸಿದ್ಧ ಇಂಜಿನಿಯರ್‌ಗಳು, ಡಿಆರ್‌ಡಿಒ, ಐಐಎಸ್‌ಸಿ, ಎನ್‌ಎಎಲ್, ಎಸ್‌ಎಸ್‌ಸಿ ವಿಜ್ಞಾನಿಗಳು, ನಿವೃತ್ತ ಇಂಜಿನಿಯರ್‌ಗಳು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಯಿತು.

ಡಾ.ಮಂಜುನಾಥ್ ಭಂಡಾರಿ ಅವರು ‘ಕೋರ್ ವಲಯ ಸುಧಾರಿಸುವಲ್ಲಿ ಯುವ ಇಂಜಿನಿಯರ್‌ಗಳ ಕೌಶಲ ಅಭಿವೃದ್ಧಿ: ದೃಷ್ಟಿಕೋನ 2025’ ವಿಷಯ ಕುರಿತು ಮಾತನಾಡಿ, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ವಿಶೇಷ ಗುಣವನ್ನು ಸ್ಮರಿಸಿದರು. ಬದಲಾಗುತ್ತಿರುವ ವಿಶ್ವದಲ್ಲಿ ಪ್ರತಿಯೊಬ್ಬರು ವಿಶ್ವೇಶ್ವರಯ್ಯ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು. ಪ್ರಶಸ್ತಿ ಬರಲು ಕಾರಣವಾದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಪ್ರಶಂಸಿದರು.

ದೂರದೃಷ್ಟಿತ್ವದ ಉದ್ಯಮಿ, ಶಿಕ್ಷಣತಜ್ಞ ಮತ್ತು ರಾಜಕಾರಣಿಯಾದ ಡಾ. ಮಂಜುನಾಥ್ ಭಂಡಾರಿ ಅವರು ಕ್ರಿಯಾಶೀಲ ನಾಯಕತ್ವದಿಂದಾಗಿ ಶಿಕ್ಷಣದಲ್ಲಿ ಹಲವು ಸುಧಾರಣೆ ತಂದಿದ್ದಾರೆ. ಸಮಾಜದಲ್ಲಿ ಉದ್ಯಮ ಬೆಳವಣಿಗೆಗೆ ಇವರು ಬೆನ್ನೆಲುಬಾಗಿ ನಿಂತಿದ್ದಾರೆ. ಇವರು ಯುಎಸ್‌ಎ, ಫಿಲೆಡೆಲ್ಫಿಯಾದ ಐಸನ್‌ಹೋವರ್ ಫೌಂಡೇಶನ್ ನೀಡುವ ಐಸೆನ್ ಹೋವರ್ ಫೆಲೋಶಿಪ್ ಪಡೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಇವರನ್ನು ವಿಶೇಷ ಆಹ್ವಾನಿತರಾಗಿ ನಾಮನಿರ್ದೆಶನ ಮಾಡಿದೆ. ಅಲ್ಲದೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನೀಡುವ ಎರಡನೆ ಕರ್ನಾಟಕ ಶಿಕ್ಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News