ಸರ್ಜಿಕಲ್ ದಾಳಿಯ ಶ್ರೇಯವನ್ನು ಆರೆಸ್ಸೆಸ್ ಗೆ ನೀಡಿದ ರಕ್ಷಣಾ ಸಚಿವ ಪರಿಕರ್
ಗುಜರಾತ್, ಅ.17: ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ಶ್ರೇಯವನ್ನು ಆರೆಸ್ಸೆಸ್ ಜೊತೆಗೆ ಜೋಡಿಸುವ ಮೂಲಕ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಇನ್ನೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
ಗುಜರಾತ್‌ನ ನಿರ್ಮಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ‘ ನಿಮ್ಮ ಸೇನೆಯ ಬಗ್ಗೆ ತಿಳಿದುಕೊಳ್ಳಿ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಮಹಾತ್ಮಾ ಗಾಂಧೀಜಿಯವರ ಹುಟ್ಟುನೆಲದಿಂದ ಬಂದ ಪ್ರಧಾನಿ, ಗೋವಾದಿಂದ ಬಂದ ರಕ್ಷಣಾ ಸಚಿವ ಮತ್ತು ಸರ್ಜಿಕಲ್ ದಾಳಿ. ಬಹುಷಃ ಇದಕ್ಕೆ ಆರೆಸ್ಸೆಸ್ ಪ್ರೇರಣೆ ಇರಬಹುದು. ಆದರೆ ಇದೊಂದು ವಿಭಿನ್ನ ರೀತಿಯ ಸಂಯೋಗ.. ಹೀಗೆಂದು ಹೇಳಿ ಅವರು ನೆರೆದವರಲ್ಲಿ ಗೊಂದಲವನ್ನು ಬಿತ್ತಿದರು.
ಉರಿಯಲ್ಲಿ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಿ ಮತ್ತು ತಾನು ಕಠಿಣ ಸಂದರ್ಭ ಎದುರಿಸಬೇಕಾಯಿತು. ಸೆ.29ರವರೆಗೆ ಸಾಮಾಜಿಕ ಮಾಧ್ಯಮ, ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಧಾನಿಯವರನ್ನು ಗುರಿಯಾಗಿಸಿಕೊಳ್ಳಲಾಯಿತು. ನಾನು ಕೂಡಾ ಟೀಕೆಗೆ ಗುರಿಯಾಗಿದ್ದೆ ಎಂದು ರಕ್ಷಣಾ ಸಚಿವರು ಹೇಳಿದರು.
ಅಮೆರಿಕಾದವರು ಚಂದ್ರನೆಡೆಗೆ ಪ್ರಥಮ ಮಾನವನನ್ನು ಕಳಿಸಿದಾಗ ನನ್ನ 72 ವರ್ಷದ ಅಜ್ಜಿ ಅದನ್ನು ನಂಬಲೇ ಇಲ್ಲ. ಆಕೆ ಸಾಕ್ಷಿ ಕೇಳಿದಳು. ಆ ಕುರಿತ ಫೋಟೋಗಳನ್ನು ತೋರಿಸಿದರೂ ಆಕೆ ನಂಬಲು ತಯಾರಿಲ್ಲ. ಸಾಯುವವರೆಗೂ ಆಕೆಗೆ ಮನದಟ್ಟು ಮಾಡಿಕೊಡಲು ನಮ್ಮಿಂದ ಆಗಲೇ ಇಲ್ಲ. ಅದೇ ರೀತಿ, ಕೆಲವರು ಪ್ರಭಲ ಸಾಕ್ಷಾಧಾರಗಳಿದ್ದರೂ ಮನದಟ್ಟು ಮಾಡಿಕೊಳ್ಳುವುದಿಲ್ಲ ಎಂದು ಪರಿಕ್ಕರ್, ಸರ್ಜಿಕಲ್ ಸ್ಟ್ರೈಕ್ ದಾಳಿಗೆ ಸಾಕ್ಷಿ ಕೇಳುವವರನ್ನು ಪರೋಕ್ಷವಾಗಿ ಛೇಡಿಸಿದರು.
ದ್ವಿತೀಯ ವಿಶ್ವಯುದ್ದದ ಸಂದರ್ಭ ಭಾರತದ ಸೇನೆಯ ಸಾಧನೆ ವಿವರಿಸಿದ ಪರಿಕ್ಕರ್, ಇದು ನನ್ನ ಸೇನೆ. ಸೇನೆ ಏನಾದರೂ ಹೇಳಿದರೆ ಅದಕ್ಕೆ ಸಾಕ್ಷಿ ಕೊಡಿ ಎನ್ನುವವ ನಾನಲ್ಲ ಎಂದರು.
ಭಾರತ-ಪಾಕ್ ಗಡಿಯಲ್ಲಿ ಪಾಕ್ ಸೇನೆಯಿಂದ ನಿರಂತರವಾಗಿ ಯುದ್ದ ವಿರಾಮದ ಉಲ್ಲಂಘನೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಿಕ್ಕರ್, ಕಳೆದ ಐದಾರು ವರ್ಷಗಳಲ್ಲಿ ಇಂತಹ ಘಟನೆ ನೂರಾರು ಬಾರಿ ನಡೆದಿದೆ. ಈಗಿನ ಸಂದರ್ಭದ ವ್ಯತ್ಯಾಸವೆಂದರೆ, ಈಗ ನಾವು ಅವರಿಗೆ ಮರೆಯಲಾಗದಂತಹ ಪ್ರತ್ಯುತ್ತರ ನೀಡುತ್ತಿದ್ದೇವೆ ಎಂದರು.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಗೋಲ್ಡನ್ ಕಟರ್ ವಿಭಾಗದ ಪ್ರಧಾನ ದಂಡನಾಯಕ ಎಸ್.ಕೆ.ಪರಾಷರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.