×
Ad

ಉಡುಪಿ ಸರಕಾರಿ ಆಸ್ಪತ್ರೆಯ ಖಾಸಗೀಕರಣದ ವಿರುದ್ಧ ಧರಣಿ

Update: 2016-10-17 21:27 IST

ಉಡುಪಿ, ಅ.17: ಉಡುಪಿಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯನ್ನು ಖಾಸಗಿಯವರ ಅಧೀನಕ್ಕೆ ಒಪ್ಪಿಸದಂತೆ ಆಗ್ರಹಿಸಿ ಸಿಪಿಎಂ ಉಡುಪಿ ತಾಲೂಕು ಸಮಿತಿ ಸೋಮವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್ ಎದುರು ಧರಣಿ ನಡೆಸಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ, ಹಿರಿಯ ಚಿಂತಕ ಜಿ.ರಾಜಶೇಖರ್, ಸ್ಟಾರ್ ಹೋಟೆಲ್‌ಗಳಂತೆ ಸರಕಾರಿ ಶಾಲೆ, ಆಸ್ಪತ್ರೆಗಳಿಂದ ಕೂಡ ಬಡವರನ್ನು ದೂರ ಉಳಿಯುವಂತೆ ಮಾಡಲಾಗುತ್ತಿದೆ. ಸರಕಾರ ಶಿಕ್ಷಣ, ವೈದ್ಯಕೀಯ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರ ವಿರುದ್ಧ ಹೋರಾಟ ಅಗತ್ಯ ಎಂದು ಹೇಳಿದರು.

ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸುವ ಯತ್ನ ನಡೆಯುತ್ತಿದ್ದರೂ ಪ್ರತಿಪಕ್ಷವಾಗಿರುವ ಬಿಜೆಪಿ ಈ ಬಗ್ಗೆ ಚಕಾರ ಎತ್ತದೆ ವೌನವಾಗಿದೆ. ಉತ್ತಮ ಸೇವೆ ನೀಡುವ ಆಸ್ಪತ್ರೆಗೆ ಸೌಲಭ್ಯ ಹೆಚ್ಚಿಸುವ ಬದಲು ಖಾಸಗಿಯವರಿಗೆ ವಹಿಸಿ ಕೊಡುವುದು ಸರಿಯಲ್ಲ ಎಂದು ಟೀಕಿಸಿದರು.

ಸಿಪಿಐಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸರಕಾರಿ ಆಸ್ಪತ್ರೆಗಾಗಿ ಹಾಜಿ ಅಬ್ದುಲ್ಲಾ ನೀಡಿದ ಜಾಗವನ್ನು ದುರ್ಬಳಕೆ ಮಾಡಲಾಗುತ್ತಿದೆ. ವಿದೇಶದಲ್ಲಿ ಹಣ ಗಳಿಸಿದವರಿಗೆ ಊರಿನ ಮೇಲೆ ಅಭಿಮಾನವಿದ್ದರೆ ಆಸ್ಪತ್ರೆಗೆ ಕಟ್ಟಡ, ಉಪಕರಣ, ವಸತಿ ಗೃಹ ನಿರ್ಮಿಸಿಕೊಡಲಿ. ಅದು ಬಿಟ್ಟು ಬೆಲೆಬಾಳುವ ಸರಕಾರಿ ಆಸ್ಪತ್ರೆಯ ಜಾಗದಲ್ಲಿ ಕಟ್ಟಡ ನಿರ್ಮಿಸಿ ಲಾಭ ಗಳಿಸುವುದಲ್ಲ ಎಂದರು.

ಬಳಿಕ ಈ ಕುರಿತ ಮನವಿಯನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು.

ಧರಣಿಯಲ್ಲಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷೆ ಸ್ವರ್ಣಲತಾ ಭಟ್, ಜಮಾಅತೆ ಇಸ್ಲಾಮೀ ಹಿಂದ್‌ನ ಇದ್ರಿಸ್ ಹೂಡೆ, ಸಿಪಿಎಂ ಮುಖಂಡರಾದ ಕೆ.ಶಂಕರ್, ಕವಿರಾಜ್, ಪಿ. ವಿಶ್ವನಾಥ ರೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News