ಅಂತರ್ಜಲ ಸಂರಕ್ಷಣೆಗೆ ಒತ್ತು: ಸಚಿವ ಪ್ರಮೋದ್

Update: 2016-10-17 16:19 GMT

ಉಡುಪಿ, ಅ.17: ಜೀವನಕ್ಕೆ ಅತ್ಯಗತ್ಯವಾದ ಜಲಸಂರಕ್ಷಣೆಗೆ ಆದ್ಯತೆ ನೀಡಲು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದ್ದು, ಅದರಂತೆ ಉಡುಪಿ ನಗರ ವ್ಯಾಪ್ತಿಯಲ್ಲಿ ಏಳು ಕೆರೆಗಳನ್ನು ಮೂರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ರಾಜ್ಯ ಮೀನುಗಾರಿಕಾ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಜಲ ಮತ್ತು ಉದ್ಯಾನಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಈವರೆಗೆ 3 ಕೋಟಿ ರೂ.ವೆಚ್ಚದಲ್ಲಿ 7 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ನು 13 ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

1.18 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಣಿಪಾಲ ಮಣ್ಣುಪಳ್ಳ ಕೆರೆಯ ಹೂಳೆತ್ತುವ ಕಾಮಗಾರಿ, 16 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ದೊಡ್ಡಣಗುಡ್ಡೆ ನೆಕ್ಕರೆಕೆರೆ ಅಭಿವೃದ್ಧಿ ಕಾಮಗಾರಿ, 7 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಕಕ್ಕುಂಜೆ 1ನೇ ವಾರ್ಡಿನಲ್ಲಿರುವ ಟ್ರಿನಿಟಿ ಶಾಲೆಯ ಮುಂಭಾಗದ ಆವರಣದ ಗೋಡೆಗೆ ಹೊಂದಿಕೊಂಡಿರುವ ಕೆರೆಯ ಕಾಮಗಾರಿ, 6 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಈಶ್ವರ ನಗರದ ಅಟೋಬಾರ್ ಹತ್ತಿರದಲ್ಲಿರುವ ಪಾಂಡವಕೆರೆ ಅಭಿವೃದ್ಧಿ ಕಾಮಗಾರಿ, 25 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯ ಲಕ್ಷ್ಮೀ ಗಣಪತಿ ದೇವಸ್ಥಾನದ ಹತ್ತಿರದಲ್ಲಿರುವ ಖಂಡಿಗೆ ಸರಕಾರಿ ಕೆರೆ ಅಭಿವೃದ್ಧಿ ಪಡಿಸುವ ಕಾಮಗಾರಿ, 25 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಪಡುತೋನ್ಸೆ ಹೂಡೆಯಲ್ಲಿರುವ ಸರಕಾರಿ ಕೆರೆಯನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗಳು ಸಂಪೂರ್ಣಗೊಂಡಿವೆ ಎಂದವರು ನುಡಿದರು.

ಕೆರೆಗಳ ಒತ್ತುವರಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಲಾಗಿದ್ದು, ಸಮಗ್ರ ಕೆರೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಕಲ್ಮಾಡಿ ಪಾರ್ಕ್‌ಗೆ ಮತ್ತು ಹನುಮಂತನಗರ ಪಾರ್ಕ್ ನಿರ್ಮಾಣ ಸಂಪೂರ್ಣಗೊಂಡಿದೆ. ಮೆಸ್ಕಾಂ ಸಬ್‌ಸ್ಟೇಷನ್‌ಗೆ ಜಾಗ ನೀಡುವ ಬಗ್ಗೆ ಪರಿಶೀಲಿಸಲು ಉಸ್ತುವಾರಿ ಸಚಿವರು ಸೂಚಿಸಿದರು.

ಸಿ.ಎ.ಸೈಟ್‌ಗಳನ್ನು ಕಾನೂನು ಪ್ರಕಾರ ವಿಲೇ ಮಾಡಿಡ ಹಾಗೂ ಅವುಗಳ ಸದುಪಯೋಗಪಡಿಸಿಕೊಳ್ಳಿ ಎಂದರು. ಅಗತ್ಯ ಕಾನೂನು ತಿದ್ದುಪಡಿಗೆ ಸಂಬಂಧಿಸಿದಂತೆ ಪ್ರಾಧಿಕಾರ ಸದಸ್ಯರ ನಿಯೋಗದೊಂದಿಗೆ ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಬೆಯಲ್ಲಿ ನಿರ್ಧರಿಸಲಾಯಿತು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ಧನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News