ನಿವೇಶನರಹಿತರಿಗೆ ಸರಕಾರಿ ಭೂಮಿಯನ್ನು ಮೀಸಲಿರಿಸಿ: ಸೊರಕೆ
ಉಡುಪಿ, ಅ.17: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರಿ ಭೂಮಿ ಇದ್ದು, ನಿವೇಶನ ರಹಿತರಿಂದ ಸಾಕಷ್ಟು ಅರ್ಜಿಗಳು ಬರುತ್ತಿವೆ. ಆದುದರಿಂದ ಬೇಡಿಕೆ ಇರುವ ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ನಿವೇಶನರಹಿತರಿಗೆ ಮೀಸಲಿರಿಸುವ ಕಾರ್ಯ ಮಾಡಬೇಕು ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಉಡುಪಿ ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕೆಲವು ಗ್ರಾಪಂಗಳಲ್ಲಿ ಸರಕಾರಿ ಜಾಗದ ಕೊರತೆ ಇದೆ ಎಂದು ಅಧಿಕಾರಿ ಗಳು ಹೇಳುತ್ತಿದ್ದಾರೆ. ಆದರೆ ಬೊಮ್ಮರಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆಗೆ ತೆರಳಿದ್ದಾಗ ಅಲ್ಲಿ 100 ಎಕರೆ ಜಾಗವನ್ನು ರಿಯಲ್ ಎಸ್ಟೇಟ್‌ಗಾಗಿ ಖಾಸಗಿಯವರು ಜೆಸಿಬಿ ಮೂಲಕ ಸಮತಟ್ಟು ಮಾಡುತ್ತಿ ದ್ದರು. ಇವರಿಗೆ ನಿವೇಶನ ರಹಿತರಿಗೆ ಭೂಮಿ ನೀಡಲು ಸರಕಾರಿ ಜಾಗ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸೊರಕೆ, ಕೆಲವರು ಮನೆ ನಿವೇಶನಕ್ಕಾಗಿ ಕೃಷಿ ಮಾಡದ ಭೂಮಿಯನ್ನು ನೀಡಲು ಸಿದ್ಧರಿದ್ದಾರೆ ಎಂದರು.
ತಾಲೂಕಿನಲ್ಲಿ ಮಲೇರಿಯಾ ಪ್ರಕರಣಗಳು ಕಳೆದ ಬಾರಿಗಿಂತ ಈ ಬಾರಿ ಸಾಕಷ್ಟು ಕಡಿಮೆಯಾಗಿದೆ. ಕಳೆದ ಬಾರಿ 249 ಪ್ರಕರಣ ಕಂಡುಬಂದರೆ, ಈ ಬಾರಿ ಕೇವಲ 96 ಪ್ರಕರಣಗಳು ಮಾತ್ರ. ಅದೇ ರೀತಿ ಡೆಂಗ್ ಪ್ರಕರಣ ಕೂಡ ಸಾಕಷ್ಟು ಇಳಿಮುಖವಾಗಿದೆ. ಇಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಇದರ ಬಗ್ಗೆ ಕಾಮಗಾರಿ ನಡೆಸುತ್ತಿರುವ ಕಟ್ಟಡ ಮಾಲಕರಿಗೆ ತಂಡ ರಚನೆ ಮಾಡಿ ಮಾಹಿತಿ ನೀಡುವ ಕಾರ್ಯ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ಸಭೆಗೆ ತಿಳಿಸಿದರು.
ಕಾಪು ಸರಕಾರಿ ಆಸ್ಪತ್ರೆಯ ವೈದ್ಯರು ಕಳೆದ ಏಳೆಂಟು ತಿಂಗಳುಗಳಿಂದ ಕರ್ತವ್ಯಕ್ಕೆ ಹಾಜರಾಗದೆ ರಜೆಯಲ್ಲಿ ಇದ್ದಾರೆ. ಇವರಿಗೆ ಹಲವು ಬಾರಿ ನೋಟೀಸ್ ಜಾರಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಆದು ದರಿಂದ ಅವರ ವಿರುದ್ಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಗಳು ಶೀಘ್ರವೇ ಕ್ರಮ ತೆಗೆದುಕೊಳ್ಳಲಿದ್ದಾರೆ. ಈ ಬಗ್ಗೆ ಸರಕಾರಕ್ಕೂ ಬರೆಯಲಾಗಿದೆ ಎಂದರು.
ಮೂಡಬೆಟ್ಟು ಆಸ್ಪತ್ರೆಗೆ ಮಣಿಪುರ ಆಸ್ಪತ್ರೆಯ ವೈದ್ಯರನ್ನು ನೇಮಕ ಮಾಡ ಲಾಗಿದ್ದು, ಅವರು ರೋಗಿಗಳು ಹಾಗೂ ಜನಪ್ರತಿನಿಧಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಆದುದರಿಂದ ಅವರನ್ನು ಅಲ್ಲಿಂದ ಬದಲಾಯಿಸಿ, ಮೂಡಬೆಟ್ಟುವಿಗೆ ಶಾಶ್ವತ ವೈದ್ಯರನ್ನು ನೇಮಕ ಮಾಡಬೇಕು ಎಂದು ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಆಗ್ರಹಿಸಿದರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ಶಿಕ್ಷಣ ಇಲಾಖೆಯ ಪ್ರಗತಿಯ ಕುರಿತು ಮಾಹಿತಿ ನೀಡಿ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲು ಬಾಕಿ ಇದ್ದು, ಅದು ಬಂದ ಕೂಡಲೇ ಅದರ ಗುಣಮಟ್ಟವನ್ನು ಪರಿಶೀಲಿಸಿ ವಿತರಿಸಲಾಗುವುದು. ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿ ತಾಂಶ ಪಡೆಯುವ ನಿಟ್ಟಿನಲ್ಲಿ 120 ಎಸ್ಸಿಎಸ್ಟಿ, ಹಿಂದುಳಿದವರ್ಗ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನುರಿತ ಶಿಕ್ಷಕರಿಂದ ತಾಲೂಕಿನ ಮೂರು ಕಡೆಗಳಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಜಿಪಂ ಸದಸ್ಯೆ ಶಿಲ್ಪಾ ಸುವರ್ಣ ಮಾತನಾಡಿ, ಈ ಬಾರಿ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸುವಾಗ ಬಹಳ ವಿಳಂಬವಾಗಿದೆ. ಜುಲೈನಲ್ಲಿ ನೀಡಬೇಕಾದ ಪಠ್ಯಪುಸ್ತಕವನ್ನು ಸೆಪ್ಟಂಬರ್‌ನಲ್ಲಿ ನೀಡಲಾಗಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದರು. ಎಲ್ಲ ಮಕ್ಕಳಿಗೂ ಸಮವಸ್ತ್ರವನ್ನು ವಿತರಿಸಲಾಗಿದೆ. ಕೆಲವು ಕಡೆ ಗುಣಮಟ್ಟ ಸರಿಯಾಗಿಲ್ಲ ಎಂಬ ದೂರು ಬಂದಿದ್ದು, ಅದರಂತೆ ಅವುಗಳನ್ನು ಬದಲಾಯಿಸಿ ಬೇರೆ ನೀಡಲಾಗಿದೆ ಎಂದು ರವಿಶಂಕರ್ ಸಭೆಗೆ ತಿಳಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ನಳಿನಿ ಪ್ರದೀಪ್ ರಾವ್, ಕಾರ್ಯನಿರ್ವಹ ಣಾಧಿಕಾರಿ ಶೇಷಪ್ಪ ಮೊದಲಾದವರು ಉಪಸ್ಥಿತರಿದ್ದರು.