ಎರುಗುಂಡಿ: ಎಚ್ಚರಿಕೆ ಫಲಕ ಅಳವಡಿಕೆಗೆ ತಹಶೀಲ್ದಾರ್ ಸೂಚನೆ

Update: 2016-10-17 18:22 GMT

ಮೂಡುಬಿದಿರೆ, ಅ.17: ಕಳೆದ ಎರಡು ತಿಂಗಳಿನಲ್ಲಿ ಮೂರು ಜೀವಗಳನ್ನು ಬಲಿ ತೆಗೆದುಕೊಂಡು ಅಪಾಯಕಾರಿ ಹೊಳೆ ಜಲಪಾತ ಎಂದು ಗುರುತಿಸಿ ಕೊಂಡಿರುವ ಪುತ್ತಿಗೆ ಗ್ರಾಮದ ಕಂಚಿಬೈಲು ಎರುಗುಂಡಿ ಜಲಪಾತ ಪ್ರದೇಶದ ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಗ್ರಾಪಂಗೆ ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಸೂಚಿಸಿದ್ದಾರೆ.
ತಹಶೀಲ್ದಾರ್ ಸೋಮವಾರ ಎರುಗುಂಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಪ್ರದೇಶದಲ್ಲಿ ನೀರಿಗೆ ಇಳಿಯದಂತೆ, ಈಜಾಡದಂತೆ ಸೂಚನಾ ಫಲಕಗಳನ್ನು ಅಳವಡಿಸಲು ಅವರು ನಿರ್ದೇಶಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತಹಶೀಲ್ದಾರ್, ದೂರ ದೂರಿನಿಂದ ಎರುಗುಂಡಿಗೆ ಆಗಮಿಸುವ ಜನರು ಇಲ್ಲಿನ ನೀರಿನ ಆಳ, ಸುಳಿಗಳ ಬಗ್ಗೆ ಮಾಹಿತಿಯ ಕೊರತೆಯಿಂದ ಅಪಾಯಕ್ಕೆ ಸಿಲುಕುತ್ತಾರೆ. ಈ ಹಿನ್ನೆಲೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಅಲ್ಲದೆ ರಜಾ ದಿನ ಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಕುರಿತು ಪೊಲೀಸ್ ವೃತ್ತ ನಿರೀಕ್ಷಕರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.

ಪುತ್ತಿಗೆ ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ನಾಯಕ್ ಮಾತನಾಡಿ, ಪೊಲೀಸರನ್ನು ನಿಯೋಜಿಸಿದಲ್ಲಿ ಅವರಿಗೆ ಸಹಕರಿಸಲು ಸ್ಥಳೀಯ ಕೆಲವು ಯುವಕರು ಸ್ವಯಂಸೇವಕರಾಗಿ ಇರಲು ಸಿದ್ಧರಿದ್ದಾರೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಪಿಡಿಒ ಮಾರ್ಷಲ್ ಡಿಸೋಜ, ಪಂ. ಸದಸ್ಯರಾದ ನಾಗರಾಜ್ ಕರ್ಕೇರ, ಗಿರೀಶ್, ನವೀನ್ ಭಂಡಾರಿ, ವೀಣಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News