ಮಂಗಳೂರು ವಿ.ವಿ. ಕಬಡ್ಡಿ ಪಂದ್ಯಾಟ: ಆಳ್ವಾಸ್ ವಿನ್ನರ್, ತೆಂಕನಿಡಿಯೂರು ರನ್ನರ್ ಅಪ್
ಉಡುಪಿ, ಅ.18: ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ನಡೆದ ಮಂಗಳೂರು ವಿ.ವಿ. ಅಂತರ್‌ಕಾಲೇಜು ಉಡುಪಿ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ತಂಡ ಪ್ರಥಮ ಸ್ಥಾನ ಗೆದ್ದುಕೊಂಡಿದೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ, ಆತಿಥೇಯ ಉಡುಪಿ ಪೂರ್ಣಪ್ರಜ್ಞ ಕಾಲೇಜು ತೃತೀಯ ಮತ್ತು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ನಾಲ್ಕನೆ ಸ್ಥಾನವನ್ನು ಪಡೆದುಕೊಂಡವು. ಈ ನಾಲ್ಕು ತಂಡಗಳು ನಾಳೆ ಮಂಗಳೂರಿನಲ್ಲಿ ನಡೆಯಲಿರುವ ವಿವಿ ಮಟ್ಟ ಅಂತರ ವಲಯ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲಿವೆ.
ಕೂಟದ ಅತ್ಯುತ್ತಮ ನಿರ್ವಹಣೆ ಪ್ರಶಸ್ತಿಯನ್ನು ಪೂರ್ಣಪ್ರಜ್ಞ ಕಾಲೇಜಿನ ಸುಹಾನ್‌ರಾಜ್, ಉತ್ತಮ ಕ್ಯಾಚರ್ ಪ್ರಶಸ್ತಿಯನ್ನು ಆಳ್ವಾಸ್‌ನ ಮಲ್ಲಿಕಾರ್ಜುನ ಕೆ., ಉತ್ತಮ ರೈಡರ್ ಪ್ರಶಸ್ತಿಯನ್ನು ಆಳ್ವಾಸ್‌ನ ವಿಶ್ವರಾಜ್ ಕೆ., ಆಲ್‌ರೌಂಡರ್ ಪ್ರಶಸ್ತಿಯನ್ನು ತೆಂಕನಿಡಿಯೂರು ಸರಕಾರಿ ಕಾಲೇಜಿನ ಭಾಗ್ಯರಾಜ್ ಪಡೆದು ಕೊಂಡರು. ಪಂದ್ಯಾಟದಲ್ಲಿ ಒಟ್ಟು 24 ತಂಡಗಳು ಭಾಗವಹಿಸಿದ್ದವು.
ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ ಮಾತನಾಡಿ, ಜನತೆ ಕ್ರಿಕೆಟ್ ಬಗ್ಗೆ ತೋರುವ ಅಭಿಮಾನವನ್ನು ದೇಶಿ ಕ್ರೀಡೆಯಾಗಿರುವ ಕಬಡ್ಡಿ ಮೇಲೆಯೂ ತೋರಿಸಬೇಕು. ಮೊದಲು ಮನರಂಜನೆಗಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ಟಿ.ವಿ. ಮೊಬೈಲ್ ಮಾತ್ರ ಮನರಂಜನೆಯ ವಸ್ತುಗಳಾಗಿವೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿದರು.
ತೆಂಕನಿಡಿಯೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಹೆಗ್ಡೆ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್, ಪಿಪಿಸಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ವೆಂಕಟರಮಣ ಸೋಮಯಾಜಿ ಉಪಸ್ಥಿತರಿ ದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಟಿ.ಎಸ್.ರಮೇಶ್ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಮುಹಮ್ಮದ್ ಕಲ್ಪನ್ ವಂದಿಸಿದರು. ಸತೀಶ್ ಶೆಟ್ಟಿ ಫಲಿತಾಂಶ ಘೋಷಿಸಿದರು. ಉಪನ್ಯಾಸಕ ಮಂಜುನಾಥ ಕರಬ ಕಾರ್ಯ ಕ್ರಮ ನಿರೂಪಿಸಿದರು.