ಐತ್ತೂರು ಗ್ರಾ.ಪಂ. ಅವ್ಯವಹಾರ ಪ್ರಕರಣ: ಎಸಿಬಿ ತಂಡದಿಂದ ತನಿಖೆ
ಕಡಬ, ಅ.18. ಇಲ್ಲಿನ ಐತ್ತೂರು ಗ್ರಾಮ ಪಂಚಾಯತ್‌ನಲ್ಲಿ 2011ರಿಂದೀಚೆಗೆ ವಿವಿಧ ರೀತಿಯ ಅವ್ಯವಹಾರ ನಡೆದಿದೆಯೆಂದು ಆರೋಪಿಸಿ ಕೆ.ಪಿ. ಮೋಹನ್ ಎಂಬವರು ನೀಡಿದ್ದ ದೂರಿನಂತೆ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಿದ್ದ ನಿರ್ದೇಶನದ ಮೇರೆಗೆ ಇಲಾಖೆಯ ಉನ್ನತ ಅಧಿಕಾರಿಗಳು ಮಂಗಳವಾರದಂದು ಐತ್ತೂರು ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಎಸಿಬಿ ಇಲಾಖೆಯ ಎಸ್ಪಿಚೆನ್ನಬಸವಣ್ಣ, ಡಿವೈಎಸ್ಪಿ ಸುಧೀರ್ ಎಂ. ಹೆಗಡೆ, ಇನ್ಸ್‌ಪೆಕ್ಟರ್ ಯೊಗೀಶ್ ಕುಮಾರ್, ಎಸಿಬಿ ಬೆಂಗಳೂರು ಕಚೇರಿಯ ಪಿಡಬ್ಲ್ಯೂಡಿ ಇಂಜಿನಿಯರ್ ಕಿರಣ್ ಮಸೂತಿ, ಸಿಬ್ಬಂದಿ ಉಮೇಶ್, ರಾಧಾಕೃಷ್ಣ, ರಾಕೇಶ್ ಐತ್ತೂರು ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಹಲವು ಕಾಮಗಾರಿಗಳನ್ನು ವೀಕ್ಷಿಸಿದರಲ್ಲದೆ, ದೂರುದಾರರು, ಗ್ರಾ.ಪಂ. ಅಧ್ಯಕ್ಷರು, ಪಿಡಬ್ಲ್ಯೂಡಿ ಇಂಜಿನಿಯರ್, ಕಾಂಟ್ರಾಕ್ಟರ್, ಸೇರಿದಂತೆ ಪಂಚಾಯತ್ ಸಿಬ್ಬಂದಿಯಿಂದ ಮಾಹಿತಿಯನ್ನು ಪಡೆದುಕೊಂಡರು.
ಐತ್ತೂರು ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಅವ್ಯವಹಾರಗಳು ನಡೆದಿದ್ದು, ಈ ಬಗ್ಗೆ ಲೋಕಾಯುಕ್ತ ಸೇರಿದಂತೆ ವಿವಿಧ ಇಲಾಖೆಗಳಿಗೆ ದೂರು ನೀಡಲಾಗಿತ್ತು. ಜಿಲ್ಲಾ ಸೆಷನ್ಸ್ ಕೋರ್ಟ್ ಆದೇಶದಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದು, ಅವ್ಯವಹಾರ ನಡೆಸಿದವರಿಗೆ ಶಿಕ್ಷೆಯಾಗಬಹುದು.
ಕೆ.ಪಿ. ಮೋಹನ್, ದೂರುದಾರ ಸ್ಥಳೀಯ ನಿವಾಸಿ
ರಾಜಕೀಯ ದ್ವೇಷದಿಂದ 2011ರ ಕಾಮಗಾರಿಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕಾಮಗಾರಿಗಳಲ್ಲಿ ಲೋಪದೋಷಗಳಾಗಿದ್ದಲ್ಲಿ ಸ್ಥಳೀಯ ನಿವಾಸಿಯಾಗಿರುವ ದೂರುದಾರ ಕೆ.ಪಿ.ಮೋಹನ್‌ರಿಗೆ 5 ವರ್ಷಗಳ ಹಿಂದೆಯೇ ಗ್ರಾಮಸಭೆಗಳಲ್ಲಿ, ವಾರ್ಡ್ ಸಭೆಗಳಲ್ಲಿ ಈ ಬಗ್ಗೆ ಆಕ್ಷೇಪವೆತ್ತಬಹುದಿತ್ತು. ಇದೀಗ ಎಸಿಬಿ ತಂಡ ಆಗಮಿಸಿ ತನಿಖೆ ನಡೆಸುತ್ತಿದೆ. ಪಂಚಾಯತ್‌ನಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಯಾವುದೇ ಅವ್ಯವಹಾರವಾದ ಬಗ್ಗೆ ತನಿಖೆಯಲ್ಲಿ ಸಾಬೀತಾದರೆ ಯಾವುದೇ ರೀತಿಯ ಶಿಕ್ಷೆ ಅನುಭವಿಸಲು ನಾವು ತಯಾರಾಗಿದ್ದೇವೆ.
ಸತೀಶ್ ಕೆ. ಐತ್ತೂರು ಗ್ರಾ.ಪಂ. ಅಧ್ಯಕ್ಷರು.