×
Ad

ಪಂಜಾಬ್, ಗೋವಾ ಚುನಾವಣೆಯಲ್ಲಿ ಆಪ್‌ಗೆ ಬಹುಮತ: ಶಾಂತಲಾ ದಾಮ್ಲೆ

Update: 2016-10-18 21:01 IST

ಉಡುಪಿ, ಅ.18: ಆಮ್ ಆದ್ಮಿ ಪಕ್ಷದ ಉಡುಪಿ ಜಿಲ್ಲಾ ಘಟಕವು ಸ್ಥಳೀಯ ಪ್ರಮುಖರು ಮತ್ತು ಮುಖಂಡರನ್ನು ಪಕ್ಷ ಸೇರಲು ಮತ್ತು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯನ್ನು ಬೆಂಬಲಿಸಲು ಆಹ್ವಾನಿಸುತ್ತಿದೆ ಎಂದು ಪಕ್ಷದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಶಾಂತಲಾ ದಾಮ್ಲೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಲ್ಲಿ ಚುನಾವಣೆಯಲ್ಲಿ 70ರಲ್ಲಿ 67 ಸ್ಥಾನಗಳನ್ನು ಗೆದ್ದು ಅಧ್ಬುತ ಆರಂಭ ಪಡೆದ ನಂತರ, ಆಮ್ ಆದ್ಮಿ ಪಕ್ಷ (ಎಎಪಿ) ದೇಶಾದ್ಯಂತ ಜನಪ್ರಿಯತೆ ಗಳಿಸುತ್ತಿದೆ. ಮುಂದಿನ ವರ್ಷ ನಡೆಯುವ ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಭಾರಿ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸ ಹೊಂದಿದೆ ಎಂದರು.

ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯಗಳಲ್ಲಿ ಎಎಪಿಯ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ರಾಜಕೀಯ ವಿರೋಧಿಗಳು ದಿಲ್ಲಿ ಸರಕಾರದ ಕಾರ್ಯ ಚಟುವಟಿಕೆಯಲ್ಲಿ ವಿವಿಧ ರೀತಿಯ ಅಡೆತಡೆಗಳನ್ನು ಒಡ್ಡುತ್ತಿದ್ದರೂ, ಅರವಿಂದ ಕೇಜ್ರಿವಾಲ್ ನೇತೃತ್ವದ ಸರಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಸಾಧನೆಗಳನ್ನು ಮಾಡಿದೆ ಎಂದು ಶಾಂತಲಾ ದಾಮ್ಲೆ ಹೇಳಿದರು.

ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಅ.17ರಂದು ಗುಜರಾತ್‌ನ ಸೂರತ್ ನಲ್ಲಿ ನಡೆದ ರ್ಯಾಲಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಸಾಕಷ್ಟು ಅಡೆತಡೆಗಳನ್ನು ಒಡ್ಡಿದರೂ ಸಾವಿರಾರು ಮಂದಿ ಪಾಲ್ಗೊಂಡಿದ್ದಾರೆ. ಇದು ಆಪ್‌ನ ಜನಪ್ರಿಯತೆಯನ್ನು ತೋರಿಸುತ್ತದೆ ಎಂದರು.

ಇದೀಗ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅವರ ನಾಯಕತ್ವದಲ್ಲಿ ಕರ್ನಾಟಕದ ಸಾವಿರಾರು ಆಪ್ ಸ್ವಯಂಸೇವಕರು 2018ರ ರಾಜ್ಯ ವಿಧಾನಸಭೆ ಚುನಾವಣೆ ಗಾಗಿ ತೊಡಗಿಸಿಕೊಂಡಿದ್ದಾರೆ. ಸ್ವಯಂಸೇವಕರ ಸೇರ್ಪಡೆಗಾಗಿ ರಾಜ್ಯದಲ್ಲಿ ನಡೆಸಿರುವ ಮಿಸ್ಡ್‌ಕಾಲ್ (080-67331840) ಅಭಿಯಾನದಲ್ಲಿ ಕಳೆದ ಕೆಲವೇ ತಿಂಗಳಿನಲ್ಲಿ ಸಾವಿರಾರು ಸ್ವಯಂಸೇವಕರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದರು.

ದಕ್ಷಿಣ ಕನ್ನಡದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ, ಉಡುಪಿ ಜಿಲ್ಲೆಯಲ್ಲಿ 500ಕ್ಕೂ ಅಧಿಕ ಮಂದಿ ಒಂದು ಮಿಸ್ಡ್‌ಕಾಲ್ ನೀಡುವ ಮೂಲಕ ಪಕ್ಷ ಸೇರಿದ್ದಾರೆ. ರಾಜ್ಯದಲ್ಲೂ ಆಪ್ ಪಕ್ಷದತ್ತ ಜನತೆ ಒಲವು ತೋರುತಿದ್ದು, ಇಲ್ಲೂ ಪಕ್ಷ ಬಲಿಷ್ಠವಾಗಿ ಬೆಳೆಯುವ ವಿಶ್ವಾಸವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಜಂಟಿ ಕಾರ್ಯದರ್ಶಿ ಜೈಕಿಷನ್ ಪೂಜಾರಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಗಣೇಶ್, ಬೈಂದೂರು ಕ್ಷೇತ್ರದ ಸುಬ್ರಹ್ಮಣ್ಯ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಅನಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News