×
Ad

ದಿಲ್ಲಿಯಲ್ಲಿ ಅಖಿಲ ಭಾರತ ಪ್ರಥಮ ವಿಶ್ವಕರ್ಮ ಸಮ್ಮೇಳನ

Update: 2016-10-18 21:10 IST

ಹೊಸದಿಲ್ಲಿ, ಅ.18: ಪ್ರಪಂಚವನ್ನೇ ನಿರ್ಮಿಸಿದವರು ವಿಶ್ವಕರ್ಮರು ಎಂಬ ಪ್ರತೀತಿ ಇದೆ. ವಿಶ್ವಕರ್ಮ ಸಮುದಾಯಕ್ಕೆ ಸರಿಸಾಟಿ ಇಲ್ಲ, ಕಲ್ಲಿನಲ್ಲೂ ಸ್ವರವನ್ನು ಬರಿಸುವ ಚಾಣಕ್ಯತನವನ್ನು ವಿಶ್ವಕರ್ಮರು ಮೈಗೂಡಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.

ಹೊಸದಿಲ್ಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ಸೋಮವಾರ ಕಲಾ ಸಂಕುಲ ಸಂಸ್ಥೆ ಹಾಗೂ ದೆಹಲಿ ಜನಕಪುರಿ ಕನ್ನಡ ಕೂಟದ ವತಿಯಿಂದ ಆಯೋಜಿಸಲಾದ ಅಖಿಲ ಭಾರತ ವಿಶ್ವಕರ್ಮ ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಮ್ಮೇಳನದ ಅಧ್ಯಕ್ಷ ವಿಶ್ವಕರ್ಮ ಸಮಾಜದ ಮುಖಂಡ, ಸಾಹಿತಿ ಹರಿದಾಸರಾದ ಹೆಬ್ರಿ ಟಿ.ಜಿ.ಆಚಾರ್ಯ ಮಾತನಾಡಿ, ನಮ್ಮ ಕುಲದ ಗತ ವೈಭವವನ್ನು ತಿಳಿದ ಮಾತ್ರಕ್ಕೆ ನಾವು ಶ್ರೀಮಂತರಾಗುವುದಿಲ್ಲ, ಅದರೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸುವ ಜೀವನ ಮಾರ್ಗಕ್ಕಾಗಿ ಶ್ರಮಿಸಬೇಕಾಗಿದೆ, ಕಲೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ, ಜೀವ ತೇದ ವಿಶ್ವಕರ್ಮ ಸಮಾಜ ಸ್ವಾತಂತ್ರ್ಯ ದೊರಕಿ 7 ದಶಶಕಗಳು ಕಳೆದರೂ, ಇನ್ನೂ ಹಿಂದುಳಿದಿರುವುದು ವಿಷಾಧನೀಯ ಎಂದರು.

ಬಹುಭಾಷಾ ಚಿತ್ರನಟಿ ಭವ್ಯ, ಕಾಷ್ಠ ಶಿಲ್ಪಿ ಹೆಬ್ರಿ ರಮೇಶ ಆಚಾರ್ಯ, ಡಾ.ಅಮೃತಾ ಎಸ್. ಬೆನ್ನಾಳ, ಕೆ.ರಾಮ ಸ್ವಾಮಿ ರಾಮಚಾರಿ, ಕಾರ್ಕಳದ ಸರೋಜಿನಿ ವಸಂತ್, ಮಣಿಪಾಲದ ಡಾ.ಪ್ರತಿಮಾ ಜಯಪ್ರಕಾಶ್ ಆಚಾರ್ಯ, ರಾಯಚೂರು ಕೆ.ಎಂ. ಗುಂಡಪ್ಪ, ಮೈಸೂರು ಡಾ.ಸಿ.ತೇಜೋವತಿ, ಉದಯ ಕುಮಾರ್ ಪತ್ತಾರ, ವಿಶ್ವನಾಥ ಹೂಗಾರ, ರಾಘವೇಂದ್ರ ಕೆ. ಇವರಿಗೆ ರಾಷ್ಟ್ರೀಯ ವಿಶ್ವಕರ್ಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾತಾ ವಚನಶ್ರೀ, ನೇತ್ರಾವತಿ ಮಯ್ಯ, ಹೆಚ್.ಎಸ್.ಕುಲಕರ್ಣಿ, ಬಸ್ತಿ ಸದಾಶಿವ ಶೆಣೈ, ಎನ್.ಆರ್.ಶ್ರೀನಾಥ್, ರಾಯಚೂರು ವಂದನಾ ಶಿವಕುಮಾರ್, ಶಿವಾನಿ ಎಂ.ಪಿ ಕಲಬುರಗಿ ಇವರಿಗೆ ರಾಷ್ಟ್ರೀಯ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪತ್ರಕರ್ತ ಸುಕುಮಾರ್ ಮುನಿಯಾಲ್ ಸಂಪಾದಕತ್ವದಲ್ಲಿ ಮೂಡಿಬಂದ 'ಸುದ್ದಿಕಿರಣ ಪತ್ರಿಕೆ'ಯ ಸಮ್ಮೇಳನದ ವಿಶೇಷ ಸಂಚಿಕೆಯನ್ನು ಆಸ್ಕರ್ ಫೆರ್ನಾಂಡಿಸ್ ಬಿಡುಗಡೆ ಮಾಡಿದರು.

ಮಂಡ್ಯ ಕಲ್ಪವೃಕ್ಷ ಕ್ಷೇತ್ರದ ಗುರು ದೋಣಾಚಾರ್ಯ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಶುಭ ಹಾರೈಸಿದರು.

ಬೆಂಗಳೂರು ಹೈಕೋರ್ಟ್ ಖ್ಯಾತ ವಕೀಲ ಪುರುಷೋತ್ತಮ ಪ್ರಸನ್ನ, ಮಾನಸಿಕ ನರರೋಗ ತಜ್ಞ ರಾಯಚೂರು ಡಾ.ಮನೋಹರ್ ವೈ. ಪತ್ತಾರ್, ಉಡುಪಿಯ ಶಿಲ್ಪಿ ಡಾ.ಬಳ್ಕೂರು ಗೋಪಾಲ ಆಚಾರ್ಯ, ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್, ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಮಾರುತಿ ಬಡಿಗೇರ್, ದೆಹಲಿ ಜನಕಪುರಿ ಕನ್ನಡ ಕೂಟದ ಅಧ್ಯಕ್ಷ ಶ್ರೀನಾಥ್ ಎನ್.ಆರ್, ಸಮ್ಮೇಳನ ಸಮಿತಿಯ ಶೇಷಗಿರಿ ನಾಯಕ್, ಸುರೇಶ ಬಡಿಗೇರ್, ಮೈಲಾರಿ ಸಗಮಕುಂಟಾ, ಗೋವರ್ಧನ್ ರಾಯಚೂರ್, ರಹಿವ್ ಪಾಷ ದೇವದುರ್ಗ, ಮಲ್ಲಿಕಾರ್ಜುನ ರಾಯಚೂರ್ ಮತ್ತಿತರರು ಉಪಸ್ಥಿತರಿದ್ದರು.

 ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಮಾರುತಿ ಬಡಿಗೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಆರ್.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿ ರೇಖಾ ಬಡಿಗೇರ್ ವಂದಿಸಿದರು. ಹೊಸದಿಲ್ಲಿಯ ಸ್ವರಾಂಜಲಿ ಕನ್ನಡ ಕಲಾ ತಂಡ ದಿಂದ ಗೀತೆಗಳ ಗಾಯನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News