×
Ad

ಗಡಿಯಾಚೆಗಿನ ದುಸ್ಸಾಹಸ ಎದುರಿಸಲು ಸಿದ್ಧ: ಸೇನೆ

Update: 2016-10-18 22:20 IST

ಬೊನಿಯಾರ್(ಜ-ಕಾ), ಅ.18: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ದಾಳಿಯ ಹಿನ್ನೆಲೆಯಲ್ಲಿ, ಪಾಕಿಸ್ತಾನಿ ಪಡೆಗಳಾಗಲಿ, ಭಯೋತ್ಪಾದಕರಾಗಲಿ ನಡೆಸುವ ಯಾವುದೇ ದುಸ್ಸಾಹಸವನ್ನು ನಿಭಾಯಿಸಲು ಸಿದ್ಧವಾಗಿದ್ದೇನೆಂದು ಭಾರತೀಯ ಸೇನೆಯಿಂದು ಹೇಳಿದೆ.

ನಿಯಂತ್ರಣ ರೇಖೆಯ ಗುಂಟ ತಮ್ಮ ಸಿದ್ಧತೆ ಅತ್ಯುನ್ನತ ಮಟ್ಟದಲ್ಲಿದೆ. ಗಡಿಯಾಚೆಯಿಂದ ಯಾರೇ ದುಸ್ಸಾಹಸಕ್ಕೆ ಮುಂದಾದರೂ ಅದನ್ನು ನಿಭಾಯಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆಯೆಂದು ಶ್ರೀನಗರದ ನೆಲೆಯ 15 ಕಾರ್ಪ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಲೆ.ಜ.ಸತೀಶ್ ದುವಾ ಪತ್ರಕರ್ತರಿಗಿಲ್ಲಿ ತಿಳಿಸಿದರು.
ನಿಯಂತ್ರಣ ರೇಖೆಯಾಚೆಯಿಂದ ಒಳ ನುಸುಳುವಿಕೆಯಲ್ಲಿ ಹೆಚ್ಚಳವಾಗಿದೆ. ಆದರೆ, ಸೇನೆಯು ಅಂತಹ ಹಲವು ಪ್ರಯತ್ನಗಳನ್ನು ತಡೆದಿದೆ. ಅದು ಎಲ್‌ಒಸಿಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ಗಳಿಂದ ವ್ಯಕ್ತವಾಗುತ್ತಿದೆಯೆಂದು ಅವರು ಹೇಳಿದರು.

ಕೆಲವು ಒಳ ನುಸುಳುವಿಕೆಗಳು ನಡೆದಿವೆಯೆಂಬುದನ್ನು ತಾನು ಒಪ್ಪಿಕೊಳ್ಳುತ್ತೇನೆ. ಆದರೆ, ಎಲ್‌ಒಸಿಯಲ್ಲಿ ನಡೆದ ಎನ್‌ಕೌಂಟರ್‌ಗಳು ಹಾಗೂ ಕೊಂದಿರುವ ಭಯೋತ್ಪಾದಕರ ಸಂಖ್ಯೆ ಸೇನೆಯ ಸನ್ನದ್ಧತೆಯನ್ನು ತೋರಿಸುತ್ತದೆಂದು ದುವಾ ತಿಳಿಸಿದರು. ಕಳೆದ ತಿಂಗಳು ಪಿಒಕೆಯಲ್ಲಿ ನಡೆಸಿದ ಸರ್ಜಿಕಲ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಸಶಸ್ತ್ರ ಸೇನೆ ಹಾಗೂ ರಾಜಕೀಯ ನಾಯಕತ್ವ ಅದರ ಬಗ್ಗೆ ಹೇಳಬೇಕಾದುದನ್ನು ಹೇಳಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News