ಇಂದಿರಾಗಾಂಧಿ ಹತ್ಯೆ ಬಳಿಕದ ಘಟನಾವಳಿ ಕುರಿತ ‘ಅಕ್ಟೋಬರ್ 31 ’ ಸಿನೆಮಾ ಬಿಡುಗಡೆಗೆ ಸೆನ್ಸಾರ್ ಅಸ್ತು

Update: 2016-10-19 12:21 GMT

ಹೊಸದಿಲ್ಲಿ, ಅ.19: ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆ ಮತ್ತು ಆ ಬಳಿಕ ನಡೆದ ಘಟನಾವಳಿ, ಹಿಂಸಾಚಾರದ ಕುರಿತಾದ ‘ ಅಕ್ಟೋಬರ್ 31’ ಸಿನೆಮಾವನ್ನು ಕೆಲವು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಪ್ರಯೋಗದ ಬಳಿಕ ಬಿಡುಗಡೆಗೊಳಿಸಲು ಪ್ರಮಾಣಪತ್ರ ನೀಡಲಾಗಿದೆ ಎಂದು ಸೆನ್ಸಾರ್ ಮಂಡಳಿ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ. ಈ ಸಿನೆಮಾ ‘ದೇಶದ ಅತ್ಯಂತ ಹಿರಿಯ’ ರಾಜಕೀಯ ಪಕ್ಷವೊಂದರ ಸಿದ್ಧಾಂತಗಳಿಗೆ ವಿರುದ್ಧವಾಗಿರುವ ಕಾರಣ ಸಿನೆಮಾದ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ವಿಚಾರಣೆ ವೇಳೆ , ಸೆನ್ಸಾರ್ ಮಂಡಳಿ ಹೈಕೋರ್ಟ್ ಪೀಠದೆದುರು ತನ್ನ ಅಹವಾಲು ಮಂಡಿಸಿತು. ಸಿನೆಮಾದ ದೃಶ್ಯವೊಂದರ ಕ್ಲಿಪಿಂಗ್ ಅಂತರ್ಜಾಲದಲ್ಲಿ ಬಿಡುಗಡೆಯಾಗಿದ್ದು 55 ಸೆಕೆಂಡ್‌ನ ದೃಶ್ಯವೊಂದರಲ್ಲಿ ಹಿಂಸಾಚಾರಕ್ಕೆ ವ್ಯಕ್ತಿಯೋರ್ವ ಪ್ರಚೋದನೆ ನೀಡುವ ಸನ್ನಿವೇಶವಿದ್ದು ಈ ಪಾತ್ರ ಪ್ರಸಕ್ತ ರಾಜಕೀಯ ವ್ಯಕ್ತಿಯೋರ್ವರನ್ನು ಹೋಲುತ್ತದೆ ಎಂದು ಅರ್ಜಿದಾರ ಅಜಯ್ ಕಟಾರಾ ಅವರ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದರು. ಈ ಕ್ಲಿಪಿಂಗ್ ಆನ್‌ಲೈನ್‌ನಲ್ಲಿ ಬಿಡುಗಡೆಯಾದ ಬಳಿಕ ಹಿಂಸಾಚಾರದ ಘಟನೆ ನಡೆಯಿತೇ ಎಂದು ವಕೀಲರನ್ನು ಪ್ರಶ್ನಿಸಿದ ಕೋರ್ಟ್‌ನ ಪೀಠ, ಅರ್ಜಿದಾರರ ಅಭಿಪ್ರಾಯಕ್ಕೆ ಬೇರೆ ಯಾರಾದರೂ ಧ್ವನಿಗೂಡಿಸಿದ್ದಾರೆಯೇ ಎಂದು ಕೇಳಿತು.ಇದಕ್ಕೆ ವಕೀಲರು ಇಲ್ಲ ಎಂದುತ್ತರಿಸಿದರು. 1984ರ ಅಕ್ಟೋಬರ್ 31ರಂದು ಇಂದಿರಾಗಾಂಧಿಯವರ ಹತ್ಯೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News