ಮ್ಯಾನ್‌ಹಟನ್ ರೈಲು ನಿಲ್ದಾಣದ ಹೊರಗೆ ಹಿಲರಿ ನಗ್ನ ಪ್ರತಿಮೆ!
ನ್ಯೂಯಾರ್ಕ್, ಅ. 19: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರ ನಗ್ನ ಪ್ರತಿಮೆಯೊಂದು ಇಲ್ಲಿನ ಸಬ್‌ವೇ ರೈಲು ನಿಲ್ದಾಣವೊಂದರ ಹೊರಗೆ ಮಂಗಳವಾರ ಕಾಣಿಸಿಕೊಂಡಿದೆ.
ಚುನಾವಣಾ ಪ್ರಚಾರದ ಅವಧಿಯಲ್ಲಿ ಮ್ಯಾನ್‌ಹ್ಯಾಟನ್ ಸಬ್‌ವೇ ನಿಲ್ದಾಣವೊಂದರ ಹೊರಗೆ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರ ನಗ್ನ ಮೂರ್ತಿ ಕಂಡುಬರುತ್ತಿರುವುದು ಇದೇ ಮೊದಲನೆಯ ಬಾರಿಯಲ್ಲ. ಇದಕ್ಕೂ ಮೊದಲು, ಆಗಸ್ಟ್‌ನಲ್ಲಿ ಕಲಾವಿದರೊಬ್ಬರು ನಿರ್ಮಿಸಿದ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ನಗ್ನ ಪ್ರತಿಮೆಯೊಂದು ಕಂಡುಬಂದಿತ್ತು.
ಆದರೆ, ಈ ಎರಡು ನಗ್ನ ಪ್ರತಿಮೆಗಳಿಗೆ ಸಿಕ್ಕಿದ ಪ್ರತಿಕ್ರಿಯೆ ಭಿನ್ನವಾಗಿದೆ.
ಟ್ರಂಪ್ ನಗ್ನ ಪ್ರತಿಮೆಯ ಎದುರು ನಿಂತು ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾ ಜನರು ಮೋಜು ಮಾಡುತ್ತಿದ್ದರು. ಆದರೆ, ಹಿಲರಿಯ ನಗ್ನ ಪ್ರತಿಮೆಗೆ ಜನರಿಂದ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಂದ ಆಕ್ರೋಶದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಓರ್ವ ಮಹಿಳೆ ಪ್ರತಿಮೆಯನ್ನು ಉರುಳಿಸಿ ಅದರ ಮೇಲೆ ಕುಳಿತುಕೊಂಡರು. ಅದನ್ನು ಎದ್ದು ನಿಲ್ಲಿಸಲು ಬಂದ ವ್ಯಕ್ತಿಯೊಬ್ಬರನ್ನು ತಡೆದರು.
‘‘ನಮ್ಮನ್ನು ಈ ರೀತಿಯಾಗಿ ನಡೆಸಿಕೊಳ್ಳಬಾರದು’’ ಎಂಬುದಾಗಿ ಇನ್ನೊಬ್ಬ ಮಹಿಳೆ ಹೇಳುತ್ತಿರುವುದು ಕೇಳಿಸಿತು.
ಬಳಿಕ, ಪ್ರತಿಮೆಯನ್ನು ಯಾರು ಇಟ್ಟಿದ್ದಾರೋ ಅವರು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.