ಫರಂಗಿಪೇಟೆ ಹೆದ್ದಾರಿ ಬದಿಯ ಅಂಗಡಿಗಳ ತೆರವು
ಬಂಟ್ವಾಳ, ಅ. 19: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರ ಸೂಚನೆಯ ಮೇರೆಗೆ ಫರಂಗಿಪೇಟೆಯಲ್ಲಿ ಟ್ರಾಫಿಕ್ ಸುವ್ಯವಸ್ಥೆಗೆ ಕ್ರಮ ಕೈಗೊಂಡಿರುವ ಬಂಟ್ವಾಳ ಪೊಲೀಸ್ ಇಲಾಖೆ ಬುಧವಾರ ಬೆಳಗ್ಗೆ ರಸ್ತೆಬದಿಯಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿತು. ಈ ಸಂದರ್ಭದಲ್ಲಿ ತೆರವು ಕಾರ್ಯಾಚರಣೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಕೆಲವೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.
ಎಸ್ಪಿ ಭೂಷಣ್ ಜಿ. ಬೊರಸೆ ನೇತೃತ್ವದಲ್ಲಿ ರವಿವಾರ ಫರಂಗಿಪೇಟೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಫರಂಗಿಪೇಟೆಯ ಟ್ರಾಫಿಕ್ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಎಸ್ಪಿಯ ಗಮನ ಸೆಳೆದಿದ್ದರು. ಇಲ್ಲಿನ ಎರಡೂ ಬಸ್ ನಿಲ್ದಾಣಗಳ ಎದುರು ಆಟೊ ರಿಕ್ಷಾ, ಬೈಕ್ ಸಹಿತ ಖಾಸಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಬಸ್‌ಗಳು ರಾಷ್ಟ್ರೀಯ ಹೆದ್ದಾರಿಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವುದು, ಇಳಿಸುವುದರಿಂದ ಟ್ರಾಫಿಕ್ ಜಾಂ ಉಂಟಾಗುತ್ತಿದೆ ಎಂಬ ದೂರುಗಳೂ ಸಾರ್ವಜನಿಕರಿಂದ ಕೇಳಿ ಬಂದಿತು. ಸಾರ್ವಜನಿಕರ ದೂರಿಗೆ ಕೂಡಲೇ ಸ್ಪಂದಿಸಿದ ಎಸ್ಪಿ ಟ್ರಾಪಿಕ್ ಸಮಸ್ಯೆಯನ್ನು ಪರಿಶೀಲನೆ ನಡೆಸಿ ಇಲ್ಲಿನ ಟ್ರಾಫಿಕ್ ಸುವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಪೊಲೀಸ್ ಇಲಾಖೆಗೆ ಸೂಚಿಸಿದ್ದರು.
ಎಸ್ಪಿಯ ಸೂಚನೆಯ ಮೇರೆಗೆ ಸೋಮವಾರದಿಂದ ಕಾರ್ಯಾಚರಣೆಗಿಳಿದ ಬಂಟ್ವಾಳ ಟ್ರಾಫಿಕ್ ಪೊಲೀಸರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿರುವ ಬಸ್ ನಿಲ್ದಾಣಗಳ ಎದುರು ಪಾರ್ಕಿಂಗ್ ಮಾಡುವ ಖಾಸಗಿ ವಾಹನಗಳಿಗೆ ದಂಡ ವಿಧಿಸುತ್ತಿದ್ದಾರೆ. ಮಂಗಳೂರಿನಿಂದ ಬಿ.ಸಿ.ರೋಡಿಗೆ ಸಂಚರಿಸುವ ಬಸ್‌ನವರು ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವುದು, ಇಳಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಜಾವ್ ಉಂಟಾಗುತ್ತಿದ್ದು ಇನ್ನು ಮುಂದೆ ಮಂಗಳೂರಿನಿಂದ ಬರುವ ಬಸ್‌ಗಳು ನಿಲ್ಲಲು ಬಸ್ ನಿಲ್ದಾಣದ ಪಕ್ಕದಲ್ಲಿರುವ ಖಾಲಿ ಜಾಗಕ್ಕೆ ಡಾಂಬರೀಕರಣಗೊಳಿಸಲು ಸಮತಟ್ಟುಗೊಳಿಸಲೆಂದು ಜಾಗದಲ್ಲಿದ್ದ ಗೂಡಂಗಡಿ, ತಳ್ಳುಗಾಡಿಗಳನ್ನು ಪೊಲೀಸರು ತೆರವು ಕಾರ್ಯಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ವ್ಯಾಪಾರಿಗಳು ಹಾಗೂ ಸ್ಥಳೀಯ ಪ್ರಮುಖರು, ತಮ್ಮ ಹೊಟ್ಟೆ ಪಾಡಿಗಾಗಿ ಹಲವು ವರ್ಷಗಳಿಂದ ಬಡ ವ್ಯಾಪಾರಿಗಳು ಗೂಡಂಗಡಿ ಹಾಗೂ ತಳ್ಳು ಗಾಡಿಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದು ಅವುಗಳನ್ನು ಏಕಾಏಕಿ ತೆರವುಗೊಳಿಸುವುದರಿಂದ ಅವರ ಕುಟುಂಬಗಳು ಬೀದಿಗೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತಲ್ಲದೆ ತೆರವು ಕಾರ್ಯಾಚರಣೆಯೂ ಸ್ಥಗಿತಗೊಂಡಿತು.
ಬಳಿಕ ಸ್ಥಳಕ್ಕೆ ಬಂದ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಎ.ಕೆ.ರಕ್ಷಿತ್ ಗೌಡ ಹಾಗೂ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಸ್ಥಳೀಯ ಪ್ರಮುಖರೊಂದಿಗೆ ಮಾತುಕತೆ ನಡೆಸಿ, ಇಲ್ಲಿನ ಹದೆಗೆಟ್ಟಿರುವ ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸಲು ರಸ್ತೆ ಅಗಲೀಕರಣ ಅತ್ಯಗತ್ಯವಾಗಿದ್ದು ಈ ಇದಕ್ಕೆ ಸಾರ್ವಜನಿಕರು ಸಹಕರಸಬೇಕು ಎಂದು ಮನವಿ ಮಾಡಿ ಮನವೋಲಿಸುವಲ್ಲಿ ಯಶಸ್ವಿಯಾದರು. ಬಳಿಕ ಜಾಗ ಸಮತಟ್ಟುಗೊಳಿಸುವ ಕಾರ್ಯ ಮುಂದುವರಿಯಿತು.
ಪಿಡಿಒ ಮೊಬೈಲ್ ಸ್ವಿಚ್‌ಆಫ್
ರಸ್ತೆ ಅಗಲೀಕರಣಕ್ಕಾಗಿ ಬುಧವಾರ ಬೆಳಗ್ಗೆ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬದಿಯ ಗೂಡಂಗಡಿ, ತಳ್ಳುಗಾಡಿಗಳನ್ನು ಪೊಲೀಸರು ಏಕಾಏಕಿ ತೆರವುಗೊಳಿಸುತ್ತಿದ್ದಂತೆ ವ್ಯಾಪಾರಿಗಳು ಹಾಗೂ ನಾಗರಿಕರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಕೆಲವೊತ್ತು ತೆರವು ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ವ್ಯಾಪಾರಿಗಳು ಹಾಗೂ ನಾಗರಿಕರು ಪುದು ಗ್ರಾಮ ಪಂಚಾಯತ್ ಪಿಡಿಒಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದರು. ಆ ಬಳಿಕವೂ ಜನರು ಹತ್ತಾರು ಬಾರಿ ಪಿಡಿಒಗೆ ಕರೆ ಮಾಡಿ ಸ್ಥಳಕ್ಕೆ ಬಂದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವಂತೆ ಬೇಡಿಕೊಂಡರು. ಆದರೆ ಅವರು ಸ್ಥಳಕ್ಕೆ ಬಾರದೆ ನಿರ್ಲಕ್ಷಿಸಿದರು. ಬಳಿಕ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ಆಫ್ ಆಗಿರುವುದನ್ನು ಕಂಡ ವ್ಯಾಪಾರಿಗಳು ಹಾಗೂ ಸ್ಥಳೀಯರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಫರಂಗಿಪೇಟೆಯಲ್ಲಿ ಹದೆಗೆಟ್ಟಿರುವ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಇಲ್ಲಿನ ರಸ್ತೆ ಬದಿಯಲ್ಲಿ ಹಲವು ವರ್ಷಗಳಿಂದ ಕುಟುಂಬದ ಹೊಟ್ಟೆಪಾಡಿಗಾಗಿ ಗೂಡಂಗಡಿ, ತಳ್ಳುಗಾಡಿಗಳನ್ನಿಟ್ಟು ವ್ಯಾಪಾರ ನಡೆಸುತ್ತಿರುವವರನ್ನು ಬಡವರನ್ನು ಏಕಾಏಕಿ ತೆರವುಗೊಳಿಸುವುದು ಸರಿಯಲ್ಲ. ಮೊದಲು ಬೀದಿ ಬದಿಯ ಬಡ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬಳಿಕ ರಸ್ತೆ ಅಗಲಗೊಳಿಸುವ ಕಾರ್ಯಕ್ಕೆ ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳು ಮುಂದಾಗಬೇಕು.
ಇಕ್ಬಾಲ್ ಅಮೆಮಾರ್, ಮಾಜಿ ಗ್ರಾಪಂ ಸದಸ್ಯ