ಪೇಜಾವರ ಶ್ರೀ ಬೆಂಬಲಕ್ಕೆ ಶ್ರೀರಾಮಸೇನೆ: ಮುತಾಲಿಕ್

Update: 2016-10-19 15:33 GMT

ಉಡುಪಿ, ಅ.19: ಶ್ರೀರಾಮ, ಶ್ರೀಕೃಷ್ಣ , ವಾಲ್ಮೀಕಿ ಮಾಂಸಹಾರಿಗಳು ಎಂದು ಮಾತನಾಡುವ ಬದಲು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಗೋಮಾಂಸದ ಕುರಿತು ಮಾತನಾಡಲಿ. ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ಗೋಹತ್ಯೆಯನ್ನು ನಿಷೇಧಿಸಲು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿಯ ಶ್ರೀಕೃಷ್ಣಮಠಕ್ಕೆ ಇಂದು ಭೇಟಿ ನೀಡಿ ಪರ್ಯಾಯ ಪೇಜಾವರ ಶ್ರೀಗಳಿಂದ ಮಂತ್ರಾಕ್ಷತೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತಿದ್ದರು. ಗೋಹತ್ಯೆ ಹಾಗೂ ಗೋಮಾಂಸ ಸೇವನೆಯನ್ನು ನಿಷೇಧಿಸಿದರೆ ನಾವು ಸಚಿವ ಪ್ರಮೋದ್ ಮಧ್ವರಾಜ್‌ರನ್ನು ಪ್ರಶಂಶಿಸುತ್ತೇವೆ ಎಂದವರು ನುಡಿದರು.

ಮುತ್ತಿಗೆಗೆ ವಿರೋಧ:ಶ್ರೀಕೃಷ್ಣಮಠಕ್ಕೆ ಏನಾದರೂ ಅಪಮಾನ, ದಾಳಿಗಳಾದರೆ ಮಠದ ಬೆಂಬಲಕ್ಕೆ ಶ್ರೀರಾಮಸೇನೆ ಇರುತ್ತದೆ. ಇವರಿಗೆ ತಾಕತ್ತಿದ್ದರೆ ಮೊದಲು ಮಸೀದಿಯೊಳಗೆ ಪ್ರವೇಶಿಸಲಿ. ಮಸೀದಿಯೊಳಗೆ ಇವರಿಗೆ ಪ್ರವೇಶ ಇಲ್ಲ. ಅದರ ಬಗ್ಗೆ ಮಾತನಾಡುವುದಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಕೆಲವೇ ಕೆಲವು ಬುದ್ಧಿಜೀವಿಗಳು ಪ್ರಚಾರಕ್ಕಾಗಿ ಡೋಂಗಿವಾದ ಮಾಡುತ್ತಿದ್ದಾರೆ. ಇವರ ಬೂಟಾಟಿಕೆ, ನಾಟಕಗಳಿಂದ ದಲಿತರ ನಿಜವಾದ ಉದ್ದಾರವಾಗುವುದಿಲ್ಲ. ಇವರು ಅದಕ್ಕೆ ಏನೂ ಮಾಡುತ್ತಿಲ್ಲ. ಮಠದಿಂದ ದಲಿತರ ಉದ್ದಾರ ಕಾರ್ಯಗಳಾಗುತ್ತಿವೆ. ವಿಶ್ವ ಹಿಂದೂಪರಿಷತ್ ಕಳೆದ 30 ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬಂದಿದೆ ಎಂದು ಮುತಾಲಿಕ್ ಹೇಳಿದರು.

ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಅದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಪೇಜಾವರ ಸ್ವಾಮೀಜಿಗಳ ಬೆಂಬಲಕ್ಕೆ ಶ್ರೀರಾಮಸೇನೆ ಸದಾ ಇರುತ್ತದೆ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News