ಸಚಿವ ಪ್ರಮೋದ್ ಹೇಳಿಕೆಗೆ ಪೇಜಾವರ ಶ್ರೀಗಳ ಪ್ರತಿಕ್ರಿಯೆ ಏನು ಗೊತ್ತೇ?

Update: 2016-10-19 15:46 GMT

ಉಡುಪಿ, ಅ.19: ಬ್ರಾಹ್ಮಣರು ಮದ್ಯ ಮಾಂಸ ಸ್ವೀಕರಿಸಬಾರದು. ಉಳಿದವರು ಮಾಂಸಾಹಾರ ತಿನ್ನುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ ಗೋಮಾಂಸ ತಿನ್ನುವುದಕ್ಕೆ ಮಾತ್ರ ತಮ್ಮ ಸ್ಪಷ್ಟ ವಿರೋಧವಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಶ್ರೀಕೃಷ್ಣ ಮಠದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ, ಶ್ರೀಕೃಷ್ಣರು ಮಾಂಸಾಹಾರಿಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿರುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಪ್ರಮೋದ್ ಮಧ್ವರಾಜ್ ನಮ್ಮ ಮಠದ ಬಗ್ಗೆ, ಧರ್ಮದ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವವರು. ಅವರಿಗೆ ದೇವರ ಅದರಲ್ಲೂ ವಿಶೇಷವಾಗಿ ಕೃಷ್ಣನ ಬಗ್ಗೆ ವಿಶೇಷ ಭಕ್ತಿ ಇದೆ ಎಂದು ಪೇಜಾವರ ಶ್ರೀ ಹೇಳಿದರು.

ಶ್ರೀರಾಮ-ಕೃಷ್ಣ ಮಾಂಸಾಹಾರಿಗಳು ಹೌದೋ ಅಲ್ಲವೋ ಎಂಬ ಬಗ್ಗೆ ಉಲ್ಲೇಖ ಇಲ್ಲ. ಅವರು ಮಾಂಸಾಹಾರ ಸ್ವೀಕಾರ ಮಾಡಿದ್ದಕ್ಕೆ ಸ್ಪಷ್ಟ ಆಧಾರ ಗಳಿಲ್ಲ. ಆದರೆ ಕ್ಷತ್ರಿಯರು ಮಾಂಸಾಹಾರಿಗಳು ಎಂಬುದು ನಿಜ. ವಾಲ್ಮಿಕಿಯು ಬೇಡನಾಗಿರುವಾಗ ಮಾಂಸ ಸೇವಿಸಿರಬಹುದು. ತಪಸ್ವಿಗಳಾದ ಮೇಲೆ ಮಾಂಸಾಹಾರ ಸ್ವೀಕಾರ ಮಾಡಿರಲಿಕ್ಕಿಲ್ಲ ಎಂದರು.

ಹಿಂದೆ ಬ್ರಾಹ್ಮಣರು ಮಾಂಸ ಸೇವಿಸುತ್ತಿದ್ದರು ಎಂಬ ಚರ್ಚೆ ಇದೆ. ಯಜ್ಞಕ್ಕೆ ಬಲಿ ಕೊಡುತ್ತಿದ್ದರು ಎಂಬ ಚರ್ಚೆಗಳೂ ಇವೆ. ಇವೆಲ್ಲವನ್ನು ವಿವಾದ ಮಾಡಲು ಹೋಗುವುದಿಲ್ಲ. ಈಗ ಯಾವ ಬ್ರಾಹ್ಮಣರೂ ಮಾಂಸ ಸೇವಿಸಬಾರದು ಎಂಬ ಒಪ್ಪಂದ ಇದೆ. ಬ್ರಾಹ್ಮಣೇತರರು, ದಲಿತರು ಮಾಂಸ ತಿನ್ನುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಗೋಮಾಂಸ ಮಾತ್ರ ಸ್ವೀಕಾರ ಮಾಡಬಾರದು ಎಂಬುದು ತಮ್ಮ ಅಭಿಪ್ರಾಯವಾಗಿದೆ ಎಂದರು.

ಸ್ವಚ್ಚತೆಗಾಗಿ ಕನಕ ನಡೆ

ಸ್ವಚ್ಚಭಾರತ್ ಅಭಿಯಾನ ಇಲ್ಲಿಯೂ ಮಾಡಿ ಎಂದು ನಾನು ಪರ್ಯಾಯಕ್ಕಿಂತ ಮೊದಲು ಹಾಗೂ ಆನಂತರವೂ ಹೇಳಿದ್ದೆ. ಸ್ವಚ್ಚತೆ ಮಾಡುವುದಕ್ಕಾಗಿ ಕನಕ ನಡೆ ಮಾಡುತ್ತೇವೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಇದರ ಹೊರತಾಗಿ ಕನಕ ನಡೆ ಬಗ್ಗೆ ನನಗೇನು ಗೊತ್ತಿಲ್ಲ. ಇದನ್ನು ಮಾಡಿಸುವುದು ನಾನಲ್ಲ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದರು.

ಚಲೋ ಉಡುಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ವಿವಾದ ಆಗುವುದು ಬೇಡ ಎಂಬ ಕಾರಣಕ್ಕೆ ಚಲೋ ಉಡುಪಿ ಮೆರವಣಿಗೆ ನಡೆಸಿದ ಬೀದಿ ಬೇಡ. ಶ್ರೀಕೃಷ್ಣಮಠದ ಸುತ್ತಮುತ್ತಲೇ ಮಾಡಿ ಎಂದು ಸೂಚಿಸಿರು ವುದಾಗಿ ಅವರು ಹೇಳಿದರು.

ಚಲೋ ಉಡುಪಿಯವರು ಮಠಕ್ಕೆ ಮುತ್ತಿಗೆ ಹಾಕುವುದಿಲ್ಲ ಎಂದು ಭಾವಿಸಿದ್ದೇನೆ. ದಲಿತರು ಹಾಗೂ ಎಲ್ಲ ವರ್ಗದವರ ಬೆಂಬಲ ನಮಗಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News