ಬಿಲ್ ಪಾವತಿಸದ ಮಂಗಳೂರು ವನ್ ಕಚೇರಿಯ ವಿದ್ಯುತ್ ಸಂಪರ್ಕ ಕಡಿತ
ಮಂಗಳೂರು, ಅ.19: ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ವನ್ ಕಚೇರಿಯ ವಿದ್ಯುತ್ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆ ನಡೆದಿದೆ.
ವಿದ್ಯುತ್ ಕಡಿತದ ಹಿನ್ನೆಲೆಯಲ್ಲಿ ಮಂಗಳೂರು ವನ್ ಕಚೇರಿಯಲ್ಲಿ ನೀರಿನ ಬಿಲ್, ವಿದ್ಯುತ್ ಬಿಲ್, ತೆರಿಗೆ ಪಾವತಿಗೆ ಬಂದಿದ್ದ ಜನರು ಪರದಾಡಬೇಕಾಯಿತು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮಂಗಳೂರು ವನ್ ಜಿಲ್ಲಾ ಪ್ರಾಜೆಕ್ಟ್ ಮ್ಯಾನೆಜರ್ ನವೀನ್ ಶೆಟ್ಟಿ, ಕಳೆದ ಹಲವು ಸಮಯಗಳಿಂದ ಮಂಗಳೂರು ವನ್ ಲಾಲ್‌ಭಾಗ್ ಕಚೇರಿಯ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದೆ. ಕಚೇರಿಯಲ್ಲಿ ಕೇವಲ 8 ಫ್ಯಾನ್, 8 ಕಂಪ್ಯೂಟರ್‌ಗಳಿದ್ದು ಇದರ ಬಿಲ್ 16 ರಿಂದ 20 ಸಾವಿರದವರೆಗೆ ತಿಂಗಳಿಗೆ ಬರುತ್ತಿದೆ. ಉಳಿದ ಮಂಗಳೂರು ವನ್ ಕಚೆರಿಯಲ್ಲಿ ಈ ರೀತಿ ಬಿಲ್ ಬರುತ್ತಿಲ್ಲ. ಈ ಬಗ್ಗೆ ಮಂಗಳೂರು ಕಮೀಷನರ್ ಜೊತೆ ಮಾತುಕತೆ ನಡೆಸಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಾರಿ ಹೆಚ್ಚುವರಿ ಬಿಲ್ ಬರುತ್ತಿರುವುದರಿಂದ ಬಿಲ್ ಪಾವತಿ ಮಾಡಲಾಗಿಲ್ಲ. ಆದ ಕಾರಣ ವಿದ್ಯುತ್ ಕಡಿತ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಜನರೇಟರ್ ಮೂಲಕ ವಿದ್ಯುತ್ ಹರಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.