ವಿದ್ಯಾರ್ಥಿಗಳಿಗೆ ಬದುಕುವ ಶಿಕ್ಷಣ ಅಗತ್ಯ: ಹುಲಿಕಲ್ ನಟರಾಜ್
ಸುಳ್ಯ, ಅ.19: ಸಂಘಟನೆಗಳಿಗೆ ಸಹಕಾರ ಅತ್ಯಗತ್ಯವಾಗಿದ್ದು, ಅಧಿಕಾರದ ಹಿಂದೆ ಸಂಘಟನೆಗಳು ಹೋದರೆ ಭವಿಷ್ಯವಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಬದುಕುವ ಶಿಕ್ಷಣ ಅಗತ್ಯ. ಆದರೆ ಕಾಲೇಜುಗಳಲ್ಲಿ ರ್ಯಾಂಕ್ ಆಧಾರಿತ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ. ಮಾಧ್ಯಮಗಳು ಪೊಳ್ಳು ಸಂಸ್ಕೃತಿ, ನಂಬಿಕೆಗಳ ಮೇಲೆ ವೈಭವೀಕರಣ ಕೇವಲ ಟಿಆರ್‌ಪಿಗಾಗಿ ಹೆಚ್ಚಾಗುತ್ತಿದ್ದು, ವೈಜ್ಞಾನಿಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಾಧ್ಯಮಗಳು ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಮಾನಸಿಕ ಖಿನ್ನತೆಗೆ ಮಾಧ್ಯಮಗಳಲ್ಲಿ ಬರುವ ವಿಕೃತ ದೃಶ್ಯಗಳೇ ಕಾರಣ ಎಂದು ಹುಲಿಕಲ್ ನಟರಾಜ್ ಹೇಳಿದರು.
ಸೋಮವಾರ ನಡೆದ ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಸುಳ್ಯ, ಜೈ ಭಾರತ್ ವಾಹನ ಚಾಲಕ-ಮಾಲಕರ ಸಂಘ ಸುಳ್ಯ, ಅಖಿಲ ಭಾರತ್ ದಲಿತ ಕ್ರಿಯಾ ಸಮಿತಿಯ ಉದ್ಘಾಟನಾ ಹಾಗೂ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮದ ಬಳಿಕ ದೇಶಾದ್ಯಂತ ಸಾವಿರಕ್ಕೂ ಅಧಿಕ ಪವಾಡ ಬಯಲು ಕಾರ್ಯಕ್ರಮದ ಮೂಲಕ ಯಶಸ್ವಿ ಪವಾಡ ಭಂಜಕರಾದ ಹುಲಿಕಲ್ ನಟರಾಜ್ ಅವರಿಂದ ಪವಾಡ ಬಯಲು ಕಾರ್ಯಕ್ರಮವು ಸುಳ್ಯದ ಲಯನ್ಸ್ ಸಭಾಭವನದಲ್ಲಿ ನಡೆಯಿತು.
ಭಾರತೀಯ ಮಾನವ ಹಕ್ಕು ಜಾಗೃತಿ ವೇದಿಕೆಯ ಮಹಿಳಾಧ್ಯಕ್ಷೆ ರಾಜೇಶ್ವರಿ, ಭಾರತೀಯ ಮಾನವ ಹಕ್ಕು ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಆದಿತ್ಯ ಶ್ರೀನಿವಾಸ್, ಜೈ ಭಾರತ್ ಚಾಲಕ-ಮಾಲಕರ ಸಂಘದ ರಾಜ್ಯಾಧ್ಯಕ್ಷ ಪ್ರದೀಪ್.ಕೆ., ಲಯನ್ಸ್ ಕಾರ್ಯದರ್ಶಿ ರಾಮಚಂದ್ರ ಪೆಲ್ತಡ್ಕ, ಭಾರತೀಯ ಮಾನವ ಹಕ್ಕು ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ದಿನಮಣಿ ಕೇವಳ, ಸಿಪಿಸಿಆರ್‌ಐ ಗೋಪಾಲಕೃಷ್ಣ, ಭಾರತೀಯ ಮಾನವ ಹಕ್ಕು ಜಾಗೃತಿ ವೇದಿಕೆಯ ರಾಜ್ಯ ಉಪಾಧ್ಯಕ್ಷ ಶಿವಕುಮಾರ್, ಭಾರತೀಯ ಮಾನವ ಹಕ್ಕು ಜಾಗೃತಿ ವೇದಿಕೆಯ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಪ್ರಶಾಂತ್, ಬೆಂಗಳೂರು ಯುವ ಘಟಕದ ಉಪಾಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.