94ಸಿ ಅನುಷ್ಠಾನದಲ್ಲಿ ಭ್ರಷ್ಟಾಚಾರ: ಬೆಳ್ತಂಗಡಿ
ಬೆಳ್ತಂಗಡಿ, ಅ.19: ತಾಲೂಕಿನಲ್ಲಿ 94ಸಿ ಅನುಷ್ಠಾನದಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಂದಾಯ ಇಲಾಖೆ ಕಾರ್ಯವೈಖರಿ ಕುರಿತು ಬೆಳ್ತಂಗಡಿ ತಾಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಸಭೆಗೆ ಗೈರು ಹಾಜರಾಗಿದ್ದ ತಹಶೀಲ್ದಾರ್‌ರನ್ನು ಸಭೆಗೆ ಕರೆಸಿದ ಘಟನೆ ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜರಗಿತು. 94ಸಿ ಯೋಜನೆ ಅನುಷ್ಠಾನದಲ್ಲಿ ಬಡವರಿಗೆ ಅನ್ಯಾಯವಾಗುತ್ತಿದ್ದು, ದುಡ್ಡಿದ್ದವರಿಗೆ ಹಕ್ಕುಪತ್ರ ದೊರೆಯುತ್ತಿದೆ. ಹಳೇ ಅರ್ಜಿಗಳಿಗೆ ಕಿಮ್ಮತ್ತಿಲ್ಲ. ಅಲ್ಲದೆ ಬ್ರೋಕರ್‌ಗಳ ಹಾವಳಿ ಅಧಿಕವಾಗಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಎಲ್ಲ ಸದಸ್ಯರು ಆರೋಪಿಸಿದರು. ಇದಕ್ಕೆ ಸಮರ್ಪಕ ಉತ್ತರ ನೀಡಲು ತಹಶೀಲ್ದಾರ್ ಸಭೆಯಲ್ಲಿರಲಿಲ್ಲ. ಬಳಿಕ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ತಹಶೀಲ್ದಾರ್ ಪುಟ್ಟಸ್ವಾಮಿ ಅವರಿಗೆ ಕರೆ ಮಾಡಿ ಸಭೆಗೆ ಬರುವಂತೆ ಹೇಳಿದರು.
94ಸಿಗೆ ಸಂಬಂಧಪಟ್ಟ ಸುಮಾರು 17 ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ ಹಲವರಿಗೆ ಹಕ್ಕುಪತ್ರ ನೀಡಲಾಗಿದೆ. ಆದ್ಯತೆ ಮೇರೆಗೆ ಹಳೆ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಿದ್ದು, ಇನ್ನು ಅರ್ಜಿದಾರರಿಗೆ ಜಾಗ ನೀಡಲು ಜಾಗದ ಅಳತೆಗಾಗಿ ಸರ್ವೇಯರ್ ಮತ್ತು ಇತರ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ವಿಳಂಬವಾಗುತ್ತಿದೆ ಎಂದು ಸಮಜಾಯಿಶಿ ತಹಶೀಲ್ದಾರ್ ನೀಡಿದರೂ ಭ್ರಷ್ಟಾಚಾರದ ಬಗ್ಗೆ ಚಕಾರವೆತ್ತಲಿಲ್ಲ. ಲ್ಯಾಲ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ದಫನ ಭೂಮಿಯನ್ನಾಗಿ ಮಾಡುತ್ತಿರುವ ಬಗ್ಗೆ ಪ್ರಶ್ನೆ ಬಂದಾಗ ತಹಶೀಲ್ದಾರರು ನಿಗದಿತ ಸ್ಥಳದಲ್ಲೇ ದಹನ ಮಾಡಬೇಕು. ಎಲ್ಲೆಂದರಲ್ಲಿ ಮಾಡಲಾಗುವುದಿಲ್ಲ ಎಂದರು.
ಕೊಯ್ಯೂರು ಪಂಚಾಯತ್ ವ್ಯಾಪ್ತಿಯಲ್ಲಿ ನಪಂ ತ್ಯಾಜ್ಯ ಡಪಿಂಗ್ ಯಾರ್ಡ್‌ನಿಂದಾಗಿ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಜಿಪಂ ಸದಸ್ಯೆ ಮಮತಾ ಶೆಟ್ಟಿ ಪ್ರಸ್ತಾವಿಸಿದಾಗ ನಪಂ ಸದಸ್ಯ, ಅಧಿಕಾರಿಗಳೊಂದಿಗೆ ಸಭೆ ಮಾಡಿ ಪರಿಹರಿಸಿಕೊಳ್ಳಬೇಕು ಎಂದರು.
ಬಡವರ ಅಂತ್ಯಸಂಸ್ಕಾರಕ್ಕಾಗಿ ಸರಕಾರ ನಿಗದಿಪಡಿಸಿದ ಹಣ ಬಿಡುಗಡೆಯಾಗಿದ್ದು, ಕೂಡಲೇ ವಿತರಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. 94ಸಿ ವಿಚಾರದಲ್ಲಿ ತಹಶೀಲ್ದಾರರು ಸಾಕಷ್ಟು ಶ್ರಮವಹಿಸಿರುವುದನ್ನು ಜಿಪಂ ಸದಸ್ಯ ಧರಣೇಂದ್ರ ಕುಮಾರ್ ಪ್ರಶಂಸಿದರು.
ಬೋರ್‌ವೆಲ್ ಕೊರೆಯುವುದಕ್ಕೆ ಸರಕಾರ ತಡೆ ನೀಡಿದ್ದರ ಬಗ್ಗೆ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸದಸ್ಯರು ಬಹುವಾರ್ಷಿಕ ಬೆಳೆಗೆ ಅಧಿಕ ಪ್ರಮಾಣದ ನೀರು ಅಗತ್ಯವಿದ್ದು, ಸರಕಾರದ ಈ ನಿರ್ಧಾರವನ್ನು ನಾವು ಖಂಡಿಸುತ್ತೇವೆ ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ನರೇಂದ್ರ ಹತ್ತು ವರ್ಷಗಳ ಹಿಂದೆ ಸುಮಾರು 150 ಅಡಿಯಲ್ಲಿ ನೀರು ಸಿಗುತ್ತಿತು. ಆದರೆ ಈಗ 750 ಅಡಿ ಕೊರೆದರೂ ನೀರು ಸಿಕ್ಕಿದರೂ ಕಲ್ಲಿನ ಹುಡಿ ಬರುತ್ತದೆ. ಅಂತರ್ಜಲ ಹೆಚ್ಚಿಸಲು ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂಬವರ ಮಾತಿಗೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಬಳಿಕ ನಿರ್ಣಯಿಸಿ ಸರಕಾರಕ್ಕೆ ಮನವಿ ಕಳುಹಿಸಲು ನಿರ್ಧರಿಸಲಾಯಿತು. ತಾಲೂಕಿನ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ವಿಚಾರ ಬಂದಾಗ ನವೆಂಬರ್ ಮೊದಲ ವಾರದಲ್ಲಿ ಶಿಕ್ಷಕರ ನೇಮಕವಾಗಲಿದೆ ಎಂದು ಅಧಿಕಾರಿಗಳು ಉತ್ತರಿಸಿದರು.
ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ವಿಜಯ ಗೌಡ ಉಪಸ್ಥಿತರಿದ್ದರು.