ಒಂದೇ ಗುರುತುಚೀಟಿಗೆ ಹಲವು ಸಿಮ್‌ಕಾರ್ಡ್‌ಗಳು!

Update: 2016-10-20 12:04 GMT

ಕಾಸರಗೋಡು, ಅ.20: ಒಂದೇ ಗುರುತು ಚೀಟಿ ಬಳಸಿ ಹಲವು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಬೈಲ್ ಮಳಿಗೆ ಮಾಲಕನೋರ್ವನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪನಯಾಲ್‌ನ ಚಂದ್ರನ್ (42) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿಯಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥೋಮ್ಸನ್ ಜೋಸ್‌ರ ಆದೇಶದಂತೆ ಬೇಕಲ ಠಾಣಾ ಸಬ್ ಇನ್‌ಸ್ಪೆೆಕ್ಟರ್ ನೇತೃತ್ವದಲ್ಲಿ ಪೆರಿಯಾಟಡ್ಕ ಎಂಬಲ್ಲಿನ ಮೊಬೈಲ್ ಮಳಿಗೆಗೆ ದಾಳಿ ನಡೆಸಲಾಗಿದೆ. ಹಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊಬೈಲ್ ಫೋನ್ ಸಿಮ್ಗಳಿಗೆ ನೀಡುವ ಭಾವಚಿತ್ರ ಹಾಗೂ ಗುರುತುಚೀಟಿಗಳನ್ನು ದುರ್ಬಳಕೆ ಮಾಡಿ ನಾಲ್ಕು ಅಥವಾ ಐದು ಸಿಮ್‌ಗಳನ್ನು ಪಡೆದು ವಂಚನೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಪಡೆದ ಸಿಮ್ ಕಾಡ್‌ಗಳನ್ನು ಹೊರ ರಾಜ್ಯದ ಕಾರ್ಮಿಕರಿಗೆ 300ರೂ.ನಿಂದ 500 ರೂ.ಗೆ ಮಾರಾಟ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಯಂಪಾರ ನಿವಾಸಿಯಾದ ಯುವತಿಯೋರ್ವರ ಮೊಬೈಲ್ ಫೋಗೆ ಬಂದಿದ್ದ ಅಶ್ಲೀಲ ದೃಶ್ಯಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ನಡೆಸಿದ ತನಿಖೆಯಲ್ಲಿ ಪೆರಿಯಾತಡ್ಕದ ಅಂಗಡಿಯಿಂದ ಮಾರಾಟಗೈದ ಸಿಮ್ ಕಾರ್ಡ್ ಬಳಸಿ ಅಶ್ಲೀಲ ಚಿತ್ರ ಕಳುಹಿಸಿರುವುದಾಗಿ ಪತ್ತೆಹಚ್ಚಲಾಗಿದೆ. ಬಳಿಕ ತನಿಖೆಯಲ್ಲಿ ಹಲವು ಸಿಮ್ ಕಾಡ್‌ಗಳನ್ನು ಈ ರೀತಿ ಅಕ್ರಮವಾಗಿ ಮಾರಾಟಗೈದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೂರ್ಣ ಮಾಹಿತಿ ಸಂಗ್ರಹಿಸಲು ಜಿಲ್ಲಾ ಪೊಲೀಸ್ ಅಧಿಕಾರಿ ಆದೇಶ ನೀಡಿದ್ದರು.

ಹೊರ ರಾಜ್ಯಗಳಿಂದ ಆಗಮಿಸಿದ ಹಲವು ಕಾರ್ಮಿಕರು ಪೆರಿಯಾತಡ್ಕ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಇವರ ಬಳಿಯಿಂದ ಯಾವುದೇ ದಾಖಲೆಗಳನ್ನು ಪಡೆಯದೆ ಯಾರ್ಯಾರದೋ ದಾಖಲೆಗಳ ಹೆಸರಲ್ಲಿ ದುಬಾರಿ ಬೆಲೆಗೆ ಸಿಮ್‌ಕಾರ್ಡ್ ಮಾರಾಟ ಮಾಡಿರುವುದು ತನಿಖೆಯ ವೇಳೆ ಬಹಿರಂಗಗೊಂಡಿದೆ. ಇದೇ ರೀತಿ ಯಾವ ಯಾವ ಕಡೆಗಳಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಕುರಿತು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News