ಬೀದಿಬದಿ ವ್ಯಾಪಾರಿಗೆ ಹಲ್ಲೆ: ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ
ಉಡುಪಿ, ಅ.20: ಅ.19ರಂದು ಉಡುಪಿ ನಗರದ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ವೇಳೆ ಬೀದಿಬದಿ ವ್ಯಾಪಾರಿ ಶಂಕರ್ ಎಂಬವರಿಗೆ ಹಲ್ಲೆ ನಡೆಸಿ ಸಾವಿರಾರು ರೂ. ವೌಲ್ಯದ ಹಣ್ಣುಹಂಪಲುಗಳನ್ನು ನಾಶಗೈದಿರುವ ನಗರಸಭೆ ಆರೋಗ್ಯಾಧಿಕಾರಿ ಆನಂದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಐಟಿಯು ಆಗ್ರಹಿಸಿದೆ.
ಕಾರ್ಯಾಚರಣೆಯ ವೇಳೆ ಅಧಿಕಾರಿ ಆನಂದ್ ಸುಮಾರು 10ಸಾವಿರ ರೂ. ವೌಲ್ಯದ ಹಣ್ಣುಹಂಪಲುಗಳನ್ನು ಮನೆಗೆ ತೆಗೆದುಕೊಂಡು ಹೋಗಿರಬಹುದು ಅಥವಾ ಮಾರಾಟ ಮಾಡಿರಬಹುದು. ಯಾವುದೇ ಮಾಹಿತಿ ನೀಡದೆ, ನೋಟೀಸ್ ಜಾರಿ ಮಾಡದೆ ಸಂಜೆ ವೇಳೆ ಕಾರ್ಯಾಚರಣೆ ನಡೆಸಿದ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಐಟಿಯು ಮುಖಂಡ ಕವಿರಾಜ್ ಒತ್ತಾಯಿಸಿದ್ದಾರೆ.
ಪೌರಾಯುಕ್ತರ ಭೇಟಿ
ಈ ಸಂಬಂಧ ಕವಿರಾಜ್ ನೇತೃತ್ವದ ನಿಯೋಗ ಇಂದು ಉಡುಪಿ ನಗರಸಭೆ ಪೌರಾಯುಕ್ತ ಡಿ.ಮಂಜುನಾಥಯ್ಯ ಅವರನ್ನು ಭೇಟಿ ಮಾಡಿ ಆನಂದ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿತು.
ನಾಲ್ಕು ದಿನಗಳಲ್ಲಿ ಸಂಬಂಧಪಟ್ಟವರ ಸಭೆ ಕರೆದು ಮಾತುಕತೆ ನಡೆಸಿ ಬಗೆಹರಿಸಲಾಗುವುದು ಎಂದು ಪೌರಾಯುಕ್ತ ಭರವಸೆ ನೀಡಿದರು. ಈ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ನಿಯೋಗ ಎಚ್ಚರಿಕೆ ನೀಡಿತು.
ಸಂಘ ರಚನೆ
ಸಿಐಟಿಯು ನೇತೃತ್ವದಲ್ಲಿ ಇಂದು ಸಭೆ ನಡೆಸಿ ಬೀದಿ ಬದಿ ವ್ಯಾಪಾರಿಗಳ ಸಂಘವನ್ನು ರಚಿಸಿ, ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಪಿ.ವಿಶ್ವನಾಥ ರೈ ವಹಿಸಿದ್ದರು.