ಗುಜರಾತ್ ಹತ್ಯಾಕಾಂಡ; 17 ಆರೋಪಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

Update: 2016-10-20 14:22 GMT

ಅಹ್ಮದಾಬಾದ್, ಅ.20: 2002ರಲ್ಲಿ ಗೋದ್ರಾ ಹಿಂಸಾಚಾರದ ಬಳಿಕ ಸರ್ದಾರ್‌ಪುರದಲ್ಲಿ ನಡೆದ ದೊಂಬಿ, ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ 31 ಮಂದಿಯಲ್ಲಿ 14 ಆರೋಪಿಗಳನ್ನು ಗುಜರಾತ್ ಹೈಕೋರ್ಟ್ ಖುಲಾಸೆಗೊಳಿಸಿದ್ದು 17 ಮಂದಿಯ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ. ಸರ್ದಾರ್‌ಪುರ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ 33 ಮಂದಿಯನ್ನು ಜೀವಂತ ದಹಿಸಲಾಗಿತ್ತು. ಜೀವಾವಧಿ ಶಿಕ್ಷೆಗೆ ಒಳಗಾದ 17 ಮಂದಿ ಕೊಲೆ, ಕೊಲೆಯತ್ನ ದೊಂಬಿ ಮತ್ತಿತರ ಅಪರಾಧ ಕೃತ್ಯ ಎಸಗಿರುವುದಾಗಿ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಧೀಶರಾದ ಹರ್ಷ ದೇವಾನಿ ಮತ್ತು ಬೀರೇನ್ ವೈಷ್ಣವ್ ಅವರನ್ನೊಳಗೊಂಡ ವಿಭಾಗೀಯ ಪೀಠ 17 ಮಂದಿಯ ಜೀವಾವಧಿ ಶಿಕ್ಷೆ ಎತ್ತಿಹಿಡಿದರೆ, ಸಾಕ್ಷಾಧಾರಗಳ ಕೊರತೆ ಮತ್ತು ಸಾಕ್ಷಿಗಳ ಹೇಳಿಕೆಯಲ್ಲಿ ವ್ಯತ್ಯಾಸದ ಕಾರಣ ಇತರ 14 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಸರ್ದಾರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 76 ಆರೋಪಿಗಳನ್ನು ಬಂಧಿಸಿದ್ದು ಇದರಲ್ಲಿ ಇಬ್ಬರು ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರೆ ಓರ್ವ ಬಾಲಾಪರಾಧಿಯಾಗಿದ್ದ. ಜೂನ್ 2009ರಲ್ಲಿ 73 ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿ ಪ್ರಕರಣ ದಾಖಲಿಸಲಾಗಿತ್ತು. ಇವರಲ್ಲಿ 42 ಆರೋಪಿಗಳನ್ನು ಅಪರ ನ್ಯಾಯಾಲಯ ಖುಲಾಸೆಗೊಳಿಸಿತ್ತು.

ಈ ದೊಂಬಿ ಪ್ರಕರಣದ ಹಿಂದೆ ಒಳಸಂಚು ಇತ್ತು ಎಂಬ ಫಿರ್ಯಾದಿದಾರರ ವಾದವನ್ನು ಅಪರ ನ್ಯಾಯಾಲಯ ತಳ್ಳಿಹಾಕಿದ್ದು ಇದನ್ನು ಕೂಡಾ ಹೈಕೋರ್ಟ್ ಎತ್ತಿಹಿಡಿದಿದೆ. ಗೋದ್ರಾ ಘಟನೆಯ ಬಳಿಕ ಅಲ್ಪಸಂಖ್ಯಾತ ಸಮುದಾಯದವ ಮೇಲಿನ ದಾಳಿ ಪೂರ್ವಯೋಜಿತ ಮತ್ತು ಇದರ ಹಿಂದೆ ಒಳಸಂಚು ಅಡಗಿದೆ ಎಂಬುದು ಫಿರ್ಯಾದಿದಾರರ ವಾದವಾಗಿತ್ತು. ಗೋದ್ರೋತ್ತರ ಹಿಂಸಾಚಾರದ ತನಿಖೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ ತನಿಖೆ ನಡೆಸಿದ 9 ಪ್ರಕರಣಗಳಲ್ಲಿ ಈ ಪ್ರಕರಣವೂ ಸೇರಿದೆ. ನೂರಾರು ಮಂದಿಯಿದ್ದ ತಂಡವೊಂದು ಅಲ್ಪಸಂಖ್ಯಾತ ಸಮುದಾಯದವರು ವಾಸವಿದ್ದ ಸರ್ದಾರ್‌ಪುರದ ಶೇಕ್‌ವಾಸ್ ಎಂಬ ಗಲ್ಲಿಯಲ್ಲಿ ಫೆ.28ರ ನಡುರಾತ್ರಿ ಗುಂಪುಸೇರಿತ್ತು. ಭೀತರಾದ ಸ್ಥಳೀಯರು ಇಬ್ರಾಹಿಂ ಶೇಖ್ ಎಂಬವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಈ ಮನೆಗೆ ದಾಳಿಯಿಟ್ಟ ತಂಡ ಮನೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿತ್ತು. ಘಟನೆಯಲ್ಲಿ 22 ಮಹಿಳೆಯರೂ ಸೇರಿದಂತೆ ಒಟ್ಟು 33 ಮಂದಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News