ವಿಷವಿಕ್ಕಿ ಮೂರು ಸಾಕುನಾಯಿಗಳನ್ನು ಹತ್ಯೆಗೈದ ದುಷ್ಕರ್ಮಿಗಳು
ಕಾಸರಗೋಡು, ಅ.20: ಮನೆಯೊಂದರಲ್ಲಿದ್ದ ಸಾಕುನಾಯಿಗಳಿಗೆ ವಿಷವಿಕ್ಕಿ ಹತ್ಯೆಗೈದ ಘಟನೆ ಕಾಞಂಗಾಡ್‌ನಲ್ಲಿ ನಡೆದಿದೆ. ಕಾಞಂಗಾಡ್‌ನ ಸೂಸಿಮೋಳ್ ಎಂಬವರ ಮನೆಯಲ್ಲಿದ್ದ ಮೂರು ಸಾಕುನಾಯಿಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಕಾಞಂಗಾಡ್ ನಗರದಲ್ಲಿ ಟೈಲರಿಂಗ್ ಮಳಿಗೆ ಹೊಂದಿರುವ ಸೂಸಿಮೋಳ್ ಸುಮಾರು 30ರಷ್ಟು ನಾಯಿಗಳನ್ನು ಸಾಕುತ್ತಿದ್ದರು. ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗದಂತೆ ಇವರು ನಾಯಿಗಳನ್ನು ಸಾಕುತ್ತಿದ್ದರು. ಕೆಲ ಸಮಯದಿಂದ ತಂಡವೊಂದು ಇವರಿಗೆ ಕಿರುಕುಳ ನೀಡುತ್ತಿತ್ತು ಎನ್ನಲಾಗಿದ್ದು, ಒಂದು ತಿಂಗಳ ಹಿಂದೆ ಇವರ ಮನೆಯ ಮುಂಭಾಗದಲ್ಲಿ ಬೀದಿ ನಾಯಿಯೊಂದನ್ನು ಕೊಂದು ಎಸೆದು ಪರಾರಿಯಾದ ಘಟನೆ ನಡೆದಿತ್ತು. ಇದು ಮಾತ್ರವಲ್ಲದೆ, ಇವರ ಬಾವಿಗೆ ವಿಷ ಹಾಕಿದ ಘಟನೆಯೂ ಈ ಹಿಂದೆ ನಡೆದಿತ್ತು ಎನ್ನಲಾಗಿದೆ. ಇದೇ ತಂಡ ನಾಯಿಗಳಿಗೆ ವಿಷ ನೀಡಿ ಕೊಂದಿರಬಹುದು ಎಂದು ಶಂಕಿಸಲಾಗಿದೆ.
ಸೂಸಿಮೋಳ್ ಮನೆಯಿಂದ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಕಿಟಕಿ ಮೂಲಕ ಆಹಾರದಲ್ಲಿ ವಿಷ ನೀಡಿ ಸಾಯಿಸಿರುವುದು ಕಂಡು ಬಂದಿದೆ. ಕಾಞ0ಗಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೂಸಿಮೋಳ್ ಕೆಲ ವರ್ಷಗಳಿಂದ ನಾಯಿಗಳು ಸೇರಿದಂತೆ ವಿವಿಧ ಪ್ರಾಣಿಗಳ ಕುರಿತು ಅಧ್ಯಯನ ನಡೆಸುತ್ತಿದ್ದರು. ನಾಯಿಗಳ ಬಗ್ಗೆ ಇವರಿಗೆ ವಿಶೇಷ ಪ್ರೀತಿಯಿದ್ದು, ಬೀದಿಯಲ್ಲಿ ಬಿಟ್ಟು ಹೋಗುತ್ತಿದ್ದ ನಾಯಿಗಳನ್ನು ಮನೆಗೆ ತಂದು ಆರೈಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.