ಸಿಐಟಿಯು ಮಹಿಳಾ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ: ಬಜರಂಗದಳ ತಾಲೂಕು ಸಂಚಾಲಕನ ವಿಚಾರಣೆ
ಮೂಡುಬಿದಿರೆ, ಅ.20: ಸಿಐಟಿಯುನ ಮಹಿಳಾ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್‌ರನ್ನು ಗುರುವಾರ ಮೂಡುಬಿದಿರೆ ಪೊಲೀಸರು ಸವಿಚಾರಣೆ ನಡೆಸಿದ್ದಾರೆ.
ಸೆ.2ರಂದು ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆಕೊಟ್ಟ ಸಂದರ್ಭದಲ್ಲಿ ಸೋಮನಾಥ ಕೋಟ್ಯಾನ್ ತನ್ನ ಬೇಕರಿಯನ್ನು ಬಂದ್ ಮಾಡದೆ ವ್ಯಾಪಾರ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡೆ ರಮಣಿ ಮತ್ತು ಕೆಲವು ಸದಸ್ಯರು ಬೇಕರಿಯನ್ನು ಬಂದ್ ಮಾಡುವಂತೆ ಒತ್ತಾಯಿಸಿದ್ದಾರಲ್ಲದೆ ಬೇಕರಿಯ ಒಳಪ್ರವೇಶಿಸಿದ್ದರು. ಆಗ ಸೋಮನಾಥ್ ಕೋಟ್ಯಾನ್ ದಲಿತ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಮೂಡುಬಿದಿರೆ ಠಾಣೆಗೆ ದೂರು ನೀಡಲಾಗಿತ್ತು.
ಇದೇ ಸಂದರ್ಭದಲ್ಲಿ ಬೆಳುವಾಯಿ ಸೋಮನಾಥ್ ಕೋಟ್ಯಾನ್ ಅವರು ರಮಣಿ, ಶಶಿಕಲಾ, ನಮಿರಾಜ್ ಹಾಗೂ ಸುನೀಲ್ ಮತ್ತಿತರರು ತನ್ನ ಅಂಗಡಿಗೆ ಬಂದು ಬಂದ್ ಮಾಡುವಂತೆ ಒತ್ತಾಯಿಸಿ ಕ್ಯಾಶ್‌ನಿಂದ ಹಣ ಎಗರಿಸಿದ್ದಾರೆ. ಅಲ್ಲದೆ ಸಿಬ್ಬಂದಿ ಹರೀಶ್‌ಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆಮಾಡಿ ಮೊಬೈಲ್ ಕಿತ್ತುಕೊಂಡಿರುವುದಾಗಿ ಮೂಡುಬಿದಿರೆ ಠಾಣೆಗೆ ದೂರು ನೀಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸರು ಸೋಮನಾಥ ಕೋಟ್ಯಾನ್‌ರನ್ನು ಗುರುವಾರ ವಿಚಾರಣೆಗೆಂದು ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ವಿಹಿಂಪ ಮುಖಂಡ ಜಗದೀಶ ಶೇಣವ, ಸತ್ಯಜಿತ್ ಸುರತ್ಕಲ್, ಜಗದೀಶ ಅಧಿಕಾರಿ ಸಹಿತ ಇತರರು ಮೂಡುಬಿದಿರೆ ಪೊಲೀಸ್ ಠಾಣೆಗೆ ಆಗಮಿಸಿ, ಸೋಮನಾಥ ಕೋಟ್ಯಾನ್‌ರಿಗೆ ಅನ್ಯಾಯ ಆಗಿದೆ ಎಂದು ದೂರು ನೀಡಿ, ಈ ಬಗ್ಗೆಯೂ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಬಳಿಕ ಸೋಮನಾಥ ಕೋಟ್ಯಾನ್‌ರನ್ನು ವಿಚಾರಣೆ ನಡೆಸಿ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.