×
Ad

ಏಕರೂಪ ನಾಗರಿಕ ಸಂಹಿತೆಯ ಅಂತಿಮ ಗುರಿ ದಲಿತರು : ಸಚಿವ ಖಾದರ್

Update: 2016-10-20 20:50 IST

ಮಂಗಳೂರು,ಅ.20: ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲು ಹೊರಟಿರುವ ಕೇಂದ್ರ ಸರಕಾರ ಅಂತಿಮವಾಗಿ ಅಲ್ಪಸಂಖ್ಯಾತರಿಗಿಂತಲೂ ಮುಖ್ಯವಾಗಿ ದಲಿತರನ್ನು ಗುರಿಯಾಗಿರಿಸಿಕೊಂಡಿದೆ. ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಇದೆ. ಸಂವಿಧಾನದಲ್ಲಿ ದೇಶದ ಎಲ್ಲಾ ಮತಧರ್ಮ,ಸಂಸ್ಕೃತಿಯನ್ನು ಪರಿಗಣಿಸಿ ಅವುಗಳಿಗೆ ಮನ್ನಣೆ ನೀಡಿದೆ. ಸಂವಿಧಾನದ ಗೌರವವನ್ನು ಉಳಿಸಿಕೊಳ್ಳುವುದು ಸರಕಾರದ ಜವಾಬ್ದಾರಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಅವರು ಇಂದು ಮಂಗಳೂರು ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ತ್ರಿವಳಿ ತಲಾಖ್ ಎಂದರೆ ಏಕಾಏಕಿ ಹೇಳುವುದಲ್ಲ. ಅದಕ್ಕೂ ಧಾರ್ಮಿಕ ಚೌಕಟ್ಟಿನಲ್ಲಿ ನಿಯಮ ಇದೆ. ಯಾವುದೇ ಕಾನೂನನ್ನು ಏಕಾಏಕಿ ತರುವ ಬದಲು ಧಾರ್ಮಿಕ ಗುರುಗಳೊಂದಿಗೆ ,ಮತಪಂಡಿತರೊಂದಿಗೆ ಚರ್ಚಿಸಿ ತೀರ್ಮಾನಗೊಳ್ಳುವುದು ಹೆಚ್ಚು ಸೂಕ್ತ ಎಂದು ತಿಳಿಸಿದರು.

ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ ವಿಚಾರದಲ್ಲಿ ಶಾಶ್ವತ ಪರಿಹಾರ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿ ರಾಜ್ಯದ ಕರಾವಳಿ ಭಾಗದ ಸಂಸದರ ನಿಯೋಗವು ಶೀಘ್ರ ಕೇಂದ್ರ ಪೆಟ್ರೋಲಿಯಂ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ. ರಾಜ್ಯದ ಕರಾವಳಿಯಲ್ಲಿ ಮುಖ್ಯವಾಗಿ ಉಡುಪಿ,ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 3300 ನಾಡದೋಣಿಯ ಮೀನುಗಾರರಿದ್ದಾರೆ.ಈ ಪೈಕಿ 940 ದೋಣಿಯ ಮೀನುಗಾರರು ಮೀನು ಗಾರಿಕಾ ಇಲಾಖೆಯಲ್ಲಿ ನೋಂದಣೆ ಮಾಡಿಸಿದ್ದಾರೆ. ಅವರಿಗೆ ಸೀಮೆಎಣ್ಣೆ ಕೊರತೆಯಿಂದ ಮೀನುಗಾರಿಕೆಗೆ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೇಂದ್ರ ಸರಕಾರದಿಂದ ದೊರೆಯಬೇಕಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ನಕಲಿ ಕೂಪನ್ ವಿತರಣೆಯಾಗದಂತೆ ಸೂಕ್ತ ಕ್ರಮ

ರಾಜ್ಯದಲ್ಲಿ ಪಡಿತರ ಚೀಟಿ ವ್ಯವಸ್ಥೆಯ ಮೂಲಕ ನಕಲಿ ಕೂಪನ್ ವಿತರಣೆಯಾಗದಂತೆ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಖಾಸಗಿಯವರಿಗೆ ವಹಿಸಲಾದ ನ್ಯಾಯ ಬೆಲೆ ಅಂಗಡಿಗಳ ಮೂಲಕ ಈ ರೀತಿ ನಕಲಿ ಕೂಪನ್ ವಿತರಣೆಯಾಗುವುದು ಪತ್ತೆಯಾದಲ್ಲಿ ಮುಂದಿನ ಹಂತದಲ್ಲಿ ಸರಕಾರದ ಮೂಲಕ ಪಡಿತರ ಸಾಮಾಗ್ರಿ ವಿತರಿಸಲು ನೇರ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.

ರಾಜ್ಯದಲ್ಲಿ 1 ಲಕ್ಷ 60 ಸಾವಿರ ನಕಲಿ ಪಡಿತರ ಕೂಪನ್ ವಿತರಣೆಯಾಗಿರುವ ಬಗ್ಗೆ ಈಗಾಗಲೇ ಮಾಹಿತಿ ದೊರಕಿದ್ದು, ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ವಾರದೊಳಗೆ ಈ ಸಂಬಂಧ ಸಮಗ್ರ ಮಾಹಿತಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.

ನ. 5ರಂದು ಮಂಗಳೂರು ತಾಲೂಕು ಜನ ಸಂಪರ್ಕ ಸಭೆ

ಮಂಗಳೂರು ತಾಲೂಕು ಜನಸಂಪರ್ಕ ಸಭೆ ನ. 5ರಂದು ತೊಕ್ಕೊಟ್ಟು ಅಥವಾ ದೇರಳಕಟ್ಟೆಯಲ್ಲಿ ನಡೆಯಲಿದೆ. ಯಾವುದೇ ಇಲಾಖೆಗೆ ಸಂಬಂಧಿಸಿದಂತೆ ದೂರು ಅಥವಾ ಅಭಿಪ್ರಾಯಗಳಿದ್ದಲ್ಲಿ ಸಾರ್ವಜನಿಕರು ಆಯಾ ಗ್ರಾಮ ಪಂಚಾಯತ್‌ಗಳಲ್ಲಿ ಒಂದು ವಾರದೊಳಗ ಅರ್ಜಿ ನೀಡಬೇಕು.ನ. 5ರಂದು ನಡೆಯುವ ಸಭೆಯಲ್ಲಿ ಆ ಸಂಬಂಧ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾವೇರಿ ನದಿ ನೀರು: ಕೇಂದ್ರ ಸರಕಾರದಿಂದ ಮತ್ತೆ ರಾಜ್ಯ ಸರಕಾರಕ್ಕೆ ಮೋಸ

2007ರ ಕಾವೇರಿ ಟ್ರಿಬ್ಯೂನಲ್ ಆದೇಶ ಪ್ರಶ್ನಿಸಿ, ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸ್ಪೆಷನ್ ಪಿಟಿಶನ್ ಹಾಕಿತ್ತು. ಅ. 17ರಂದು ಈ ಬಗ್ಗೆ ವಿಚಾರಣೆ ನಡೆದಾಗ ಕೇಂದ್ರ ಸರಕಾರದ ತಮಿಳುನಾಡು ಪವಹಿಸಿದ ಕಾರಣ ಮತ್ತೆ ರಾಜ್ಯಕ್ಕೆ ನ್ಯಾಯದೊರೆತಿಲ್ಲ ಎಂದು ಅವರು ಆರೋಪಿಸಿದರು.

ಈ ಬಾರಿಯೂ ಸರಕಾರದಿಂದ ಟಿಪ್ಪು ಜಯಂತಿ ಆಚರಣೆ ನಡೆಯಲಿದೆ. ಇತಿಹಾಸ ಗೊತ್ತಿಲ್ಲದವರು ವಿರೋಧ ಮಾಡುತ್ತಾರೆ ಕನಕ ಜಯಂತಿ, ನಾರಾಯಣ ಗುರು ಜಯಂತಿ, ವಿಶ್ವ ಕರ್ಮ ಜಯಂತಿ,ವಾಲ್ಮೀಕಿ ಜಯಂತಿ ಆಚರಣೆಯಂತೆ ಟಿಪ್ಪು ಜಯಂತಿ ಕೂಡಾ ನಡೆಸಲು ಸರಕಾರದ ಆದೇಶವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿರೋಧ ಮಾಡುವವರು ಮಾಡುತ್ತಿರಲಿ. ಸರಕಾರ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಧಾರದಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನು ಅನುಷ್ಠಾನಗೊಳಿಸಲು ಶಕ್ತವಾಗಿದೆ ಎಂದು ಖಾದರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮಹಮ್ಮದ್ ಮೋನು ಹಾಗೂ ಇತರ ತಾಲೂಕು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News