‘ಸ್ವಾಭಿಮಾನದ ನಡೆ’ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ: ಎಸ್ಪಿ

Update: 2016-10-20 16:05 GMT

ಉಡುಪಿ, ಅ.20: ನಮೋ ಬ್ರಿಗೆಡ್‌ನವರು ಅ.23ರಂದು ನಡೆಸಲು ಉದ್ದೇಶಿಸಿರುವ ಕನಕ ನಡಿಗೆ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದ್ದು, ಕಾನೂನು ಸುವ್ಯವಸ್ಥೆಯ ದೃಷ್ಠಿಯಿಂದ ದಲಿತ ದಮನಿತರ ಹೋರಾಟ ಸಮಿತಿಯ ‘ಸ್ವಾಭಿಮಾನದ ನಡೆ’ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸ ಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಕನಕ ನಡಿಗೆ ಕಾರ್ಯಕ್ರಮಕ್ಕೆ ಈಗಾಗಲೇ ಅನುಮತಿ ನೀಡಲಾಗಿದೆ. ನಮೋ ಬ್ರಿಗೆಡ್‌ನವರು ಸಂಸ್ಕೃತ ಕಾಲೇಜು ವೃತ್ತದಲ್ಲಿರುವ ಕನಕದಾಸ ರಸ್ತೆಯಿಂದ ರಥಬೀದಿ ವರೆಗೆ ಸ್ವಚ್ಛತ ಕಾರ್ಯಕ್ರಮ ನಡೆಸಲಿದ್ದಾರೆ. ಬಳಿಕ ಅವರ ಕಾರ್ಯಕ್ರಮ ಮಠದ ಆವರಣದಲ್ಲಿಯೇ ನಡೆಯುತ್ತದೆ. ಅದು ಬಿಟ್ಟು ಬೇರೆ ಕಡೆ ಮೆರವಣಿಗೆ ಮಾಡಲು ಅವರಿಗೆ ಅವಕಾಶ ನೀಡಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.

ಒಂದೇ ದಿನ ಎರಡು ಕಾರ್ಯಕ್ರಮಗಳನ್ನು ನಡೆಸುವುದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವುದರಿಂದ ದಲಿತ ದಮನಿತರ ಹೋರಾಟ ಸಮಿತಿಯವರಿಗೆ ಆ ದಿನ ಕಾರ್ಯಕ್ರಮ ನಡೆಸಲು ಯಾವುದೇ ಅನುಮತಿ ನೀಡಿಲ್ಲ. ಮುಂದೆ ಬೇರೆ ದಿನ ಮಾಡುವುದಾದರೆ ಅವಕಾಶ ನೀಡುವುದಾಗಿ ಸಂಘಟಕರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಅ.23ರಂದು ಉಡುಪಿ ನಗರದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲು ನಿರ್ಧರಿಸಲಾಗಿದೆ. ಅದರಂತೆ ಐದು ಕೆಎಸ್‌ಆರ್‌ಪಿ ಹಾಗೂ 10 ಡಿಎಆರ್ ತುಕುಡಿ, ಮೂವರು ಡಿವೈಎಸ್ಪಿ, ಪೊಲೀಸ್ ನಿರೀಕ್ಷಕರು, ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಮತ್ತು 100 ಮಂದಿ ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗುವುದು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News