×
Ad

ರುದ್ರೇಶ್ ಹತ್ಯೆ ಪ್ರಕರಣಕ್ಕೆ ರಾಜಕೀಯ ಬಣ್ಣ ಬೇಡ: ಐವನ್

Update: 2016-10-21 15:10 IST

ಮಂಗಳೂರು, ಅ.21: ರುದ್ರೇಶ್ ಹತ್ಯೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ವಿಷಯಕ್ಕೆ ವಿರೋಧ ಪಕ್ಷವಾದ ಬಿಜೆಪಿ ರಾಜಕೀಯ ಬಣ್ಣ ನೀಡುವುದು ಬೇಡ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.

ಮನಪಾದಲ್ಲಿರುವ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಈ ಪ್ರಕರಣವನ್ನು ಬೇಧಿಸದಿದ್ದರೆ ರಾಜ್ಯಾದ್ಯಂತ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹತ್ಯೆ ಯಾರೇ ಮಾಡಿದ್ದರೂ ಖಂಡಿಸುವಂತದ್ದು. ಆದರೆ ಇದಕ್ಕೆ ರಾಜಕಾರಣ, ಕೋಮುಭಾವನೆ ಬೆರೆಸುವುದು ಸರಿಯಲ್ಲ ಎಂದರು.

ಬಿಜೆಪಿಯ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆಯವರು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಕೇಳ ಮಾದರಿ, ಬಿಹಾರ ಮಾದರಿ ಆಡಳಿತವಿದೆ ಎಂದು ಆರೋಪಿಸಿದ್ದಾರೆ. ಕೇರಳ, ಬಿಹಾರ ಕೂಡಾ ಈ ದೇಶದ ರಾಜ್ಯಗಳು. ಹಾಗಿರುವಾಗ ದೇಶದ ಓರ್ವ ಸಂಸದರಾಗಿ ಈ ರೀತಿಯ ಹೇಳಿಕೆಯನ್ನು ನೀಡುವುದು ಶೋಭ ತರುವಂತದಲ್ಲ ಎಂದವರು ಪ್ರತಿಕ್ರಿಯಿಸಿದರು.

ಬಿಜೆಪಿಯ ದ್ವಂದ ನೀತಿ: ಆರೋಪ

ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಪ್ರವೀಣ್ ಪೂಜಾರಿ ಹತ್ಯೆ ಆದಾಗ, ಆರ್‌ಟಿಐ ಕಾರ್ಯಕರ್ತ ಬಾಳಿಗಾ ಹತ್ಯೆ ವೇಳೆ ಶೋಭಾ ಕರಂದ್ಲಾಜೆಯಾಗಲಿ, ನಳಿನ್ ಕುಮಾರ್ ಆಗಲಿ ಮಾತನಾಡಿಲ್ಲ. ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿಲ್ಲ. ಬಿಜೆಪಿಯ ಈ ರೀತಿಯ ದ್ವಂದ್ವ ನೀತಿಯಿಂದ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ಐವನ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ನಾಗೇಂದ್ರ ಕುಮಾರ್, ಮನುರಾಜ್, ಶ್ರೀರಾಮ್ ಪಕಳ, ಮೆರಿಲ್ ರೇಗೋ, ಸುರೇಂದ್ರ ಕಂಬ್ಳಿ, ಹಯಾತುಲ್, ಮನಿಶ್ ಬೋಳಾರ, ವಸಂತ ಶೆಟ್ಟಿ, ಹಸನಬ್ಬ, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News