×
Ad

ಭಟ್ಕಳ: ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

Update: 2016-10-21 17:21 IST

ಭಟ್ಕಳ,ಅ.21: ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಖಂಡಿಸಿ ಅಖಿಲಾ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ರಾಷ್ಟ್ರಾದ್ಯಂತ ನಡೆಸುತ್ತಿರುವ ಸಹಿ ಸಂಗ್ರಹ ಅಭಿಯಾನಕ್ಕೆ ಭಟ್ಕಳದಲ್ಲಿ ಬುಧವಾರ ಚಾಲನೆ ನೀಡಲಾಯಿತು.

ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಹಾಗೂ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಜಂಟಿಯಾಗಿ ನಡೆಸುತ್ತಿರುವ ಸಹಿ ಸಂಗ್ರಹ ಅಭಿಯಾನ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಜಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ, ಮದನಿ ಮಾತನಾಡಿ, ತಲಾಖ್ ಗೆ ಸಂಬಂಧಿಸಿದಂತೆ ಪವಿತ್ರ ಕುರಾನ್ ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದು, ಪತಿ ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಸಂಸಾರ ನಡೆಸುವುದು ಕಷ್ಟ ಸಾಧ್ಯವಾದಾಗ ಅಂತಿಮ ರೂಪದಲ್ಲಿ ತಲಾಖ್ ಪ್ರಯೋಗಕ್ಕೆ ಬರುತ್ತದೆ. ಮೊದಲು ಇಬ್ಬರಲ್ಲೂ ಹೊಂದಾಣಿಕೆ ಮಾಡಿಸುವ ಪ್ರಕ್ರಿಯೆಯ ನಂತರ ಯಾವುದೇ ಸಂದರ್ಭದಲ್ಲಿ ಇಬ್ಬರು ಜತೆಯಾಗಿ ಬಾಳಲು ಸಾಧ್ಯವಿಲ್ಲ ಎನ್ನುವ ಹಂತಕ್ಕೆ ತಲುಪಿದಾಗ ತಲಾಖ್ ಎನ್ನುವುದು ಅಂತಿಮ ಅಸ್ತ್ರವಾಗಿ ಉಪಯೋಗಿಸಲ್ಪಡುತ್ತದೆ. ಇದರಿಂದಾಗಿ ಇಬ್ಬರು ನೆಮ್ಮದಿಯ ಜೀವನ ನಡೆಸಬಹುದಾಗಿದ್ದು ಇದು ದಂಪತಿಗಳಿಬ್ಬರಿಗೂ ಮುಂದಿನ ಜೀವನವನ್ನು ಸಂತೋಷದಿಂದ ಕಳೆಯಲು ಅನುಕೂಲ ಮಾಡಿಕೊಡುತ್ತದೆ ಎಂದರು. ಭಾರದಲ್ಲಿ ಮುಸ್ಲಿಮರು ಷರಿಯತ್ ಕಾನೂನಿನಂತೆ ಜೀವಿಸುತ್ತಿದ್ದಾರೆ. ಎಲ್ಲ ಧರ್ಮದವರು ತಮ್ಮ ಧರ್ಮವನ್ನು ಅನುಸರಿಸುತ್ತ, ಆಚರಿಸುತ್ತ ಜೀವಿಸಬೇಕೆಂಬುದು ನಮ್ಮ ದೇಶದ ಸಂವಿಧಾನದ ಆಶಯವಾಗಿದೆ. ಇದರಂತೆ ಮುಸ್ಲಿಮರು ತಮ್ಮ ವೈಯಕ್ತಿ ಕಾನೂನಿನಂತೆ ಜೀವಿಸುತ್ತಿದ್ದಾರೆ. ಮುಸ್ಲಿಮರ ಷರಿಯತ್ ಬಗ್ಗೆ ಹಸ್ತಕ್ಷೇಪ ಮಾಡುವುದುರ ಮೂಲಕ ಸರ್ಕಾರ ಮುಸ್ಲಿಮರ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಇದು ಸಂವಿಧಾನಬಾಹಿರ ಕೃತ್ಯವಾಗಿದೆ ಎಂದರು. ಕುರಾನ್ ಹದೀಸ್ ತಿಳುವಳಿಕೆಯಿಲ್ಲದ ಕೆಲವರು ತಲಾಖ್ ನ್ನು ದುರುಪಯೋಗಪಡಿಸಿಕೊಂಡರೆ ಅದು ಇಸ್ಲಾಮಿ ಷರಿಯತ್‌ನ ತಪ್ಪಲ್ಲ ಎಂದ ಅವರು ಶಾಬಾನು ಪ್ರಕರಣದಲ್ಲಿ ದೇಶದ ಮುಸ್ಲಿಮರು ಐಕ್ಯತೆಯಿಂದ ಹೋರಾಡಿದಂತೆ ಈಗಲೂ ಎಲ್ಲರೂ ಐಕ್ಯರಾಗಿ ಸರ್ಕಾರದ ಯೋಜನೆಗಳ ವಿರುದ್ಧ ಹೋರಾಡಲಿದ್ದಾರೆ ಎಂದರು.

ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸದಸ್ಯ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ ಮಾತನಾಡಿ, ಫ್ಯಾಸಿಸ್ಟ್ ಶಕ್ತಿಗಳ ನಿರಂತರ 70-75 ವರ್ಷಗಳ ಪ್ರಯತ್ನಗಳ ನಂತರ ಈಗ ದೇಶದ ಆಡಳಿತ ಕೈಗೆ ಸಿಕ್ಕಿದೆ ಅವರು ಮುಸ್ಲಿಮರ ವಿಶ್ವಾಸವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದರು ಇದು ಎಂದಿಗೂ ಸಾಧ್ಯವಿಲ್ಲ. ಭಾರತ ದೇಶದಲ್ಲಿ ಮುಸ್ಲಿಮರು ತಮ್ಮ ವಿಶ್ವಾಸದೊಂದಿಗೆ ಜೀವಿಸುವ ಇಲ್ಲವೇ ಸಾಯುವ ನಿರ್ಣಯ ಇಂದು ತೆಗೆದುಕೊಳ್ಳದೆ ಇದ್ದರೆ ಮತ್ತೆಂದೋ ನಮ್ಮ ಪೀಳಿಗೆ ತಮ್ಮ ವಿಶ್ವಾಸದೊಂದಿಗೆ ಬದುಕಲು ಸಾಧ್ಯವಿಲ್ಲ ಎಂದ ಅವರು ಕೋಮುವಾದಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಮುಸ್ಲಿಮರ ವಿರುದ್ಧ ಷಡ್ಯಂತ್ರವನ್ನು ಮಾಡುತ್ತಿದ್ದಾರೆ ಎಂದರು.

ಮುಸ್ಲಿಮ್ ಯುತ್ ಫೆಡರೇಷರನ್ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇರ್ಫಾನ್ ನದ್ವಿ ಪ್ರಸ್ತಾವಿಕವಾಗಿ ಮಾತನಾಡಿದರು. ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ ತಂಝೀಮ್ ಈ ಕುರಿತಂತೆ ಏನೆಲ್ಲ ರೂಪರೇಶೆಗಳನ್ನು ಮಾಡಿಕೊಂಡಿದೆ ಎನ್ನುವದನ್ನು ವಿವರಿಸಿದರು. ಸಮಾರಂಭದಲ್ಲಿ ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಮೌಲಾನ ಮಖ್ಬೂಲ್ ಆಹ್ಮದ್ ಕೋಬಟ್ಟೆ, ಫೆಡರೇಷನ್ ಅಧ್ಯಕ್ಷ ಇಮ್ತಿಯಾರ್ ಉದ್ಯಾವರ್, ಉಪಾಧ್ಯಕ್ಷ ಮೌಲಾನ ಇರ್ಷಾದ್ ನಾಯ್ತೆನದ್ವಿ ಸೇರಿದಂತೆ ಭಟ್ಕಳ, ಮುರುಡೇಶ್ವರ, ಮಂಕಿ ಯ ವಿವಿಧ ಸಂಘಟನೆ, ಜಮಾಅತ್, ಯುತ್ ಕ್ಲಬ್‌ಗಳ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News