ಮಂಗಳೂರಿನಿಂದ ಧರ್ಮಸ್ಥಳಕ್ಕೆ ಕೆಎಸ್‌ಆರ್‌ಟಿಸಿಯಿಂದ ವೇಗದೂತ ಬಸ್!

Update: 2016-10-21 13:06 GMT

ಮಂಗಳೂರು, ಅ.21: ಮುಂದಿನ ಮೂರು ತಿಂಗಳ ಅವಧಿಯಲ್ಲಿ ಕೆಎಸ್‌ಆರ್‌ಟಿಸಿಯಿಂದ ಮಂಗಳೂರಿನಿಂದ ಧರ್ಮಸ್ಥಳಕ್ಕೆ ವೇಗದೂತ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ ತಿಳಿಸಿದ್ದಾರೆ.
ಅವರು ಇಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದ ವತಿಯಿಂದ ಆಯೋಜಿಸಲಾದ ಪ್ರಥಮ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಧರ್ಮಸ್ಥಳ- ಮಂಗಳೂರು ನಡುವೆ ನಾಲ್ಕು ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರುವ ವೇಗದೂತ ಬಸ್‌ಗಳು ಈ ಮಾರ್ಗದಲ್ಲಿ ಓಡಲಿದೆ ಎಂದು ಅವರು ಹೇಳಿದರು.
ಪ್ರಸ್ತುತ ಈ ಮಾರ್ಗದಲ್ಲಿ 42 ನಿಲುಗಡೆಗಳಿದ್ದು, ಇದರಿಂದ ನಾಲ್ಕು ಗಂಟೆಗಳ ಕಾಲ ಬಸ್‌ನಲ್ಲಿ ಕಳೆಯುತ್ತಿದೆ ಎಂಬುದಾಗಿ ಹರೀಶ್ ಕೋಟ್ಯಾನ್ ಎಂಬವರ ಸಮಸ್ಯೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ದೊಡ್ಡ ಪ್ರಮಾಣದಲ್ಲಿ ಅನಧಿಕೃತ ಓಡಾಟ ನಡೆಸುತ್ತಿರುವ ಪರಿಣಾಮ ಕೆಎಸ್‌ಆರ್‌ಟಿಸಿ ನಿರಂತರ ನಷ್ಟ ಅನುಭವಿಸುತ್ತಿದೆ ಎಂದು ರಾಮ್‌ನಾಯಕ್ ಆರೋಪಿಸಿದರು.
ಇದು ಜ್ವಲಂತ ಸಮಸ್ಯೆಯಾಗಿದ್ದು, ನಿಗಮದ ವ್ಯವಸ್ಥಾಪಕ ನಿರ್ದೇಶಕರ ಮಟ್ಟದಲ್ಲಿ ಸಂಬಂಧಪಟ್ಟವರಿಗೆ ದೂರು ನೀಡುತ್ತಾ ಬಂದಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸುವ ಅಧಿಕಾರ ನಮ್ಮ ಮಟ್ಟದಲ್ಲಿ ಇಲ್ಲ ಎಂದು ವಿಭಾಗೀಯ ನಿಯಂತ್ರಣಾಕಾರಿ ಸ್ಪಷ್ಟನೆ ನೀಡಿದರು.
ಕರಾವಳಿ ಭಾಗದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಸ್ಥಳೀಯ ಚಾಲಕರು ಹಾಗೂ ನಿರ್ವಾಹಕರನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಂಗಳೂರು ಮತ್ತು ಪುತ್ತೂರು ವಿಭಾಗ ಮಟ್ಟದಲ್ಲಿ ಪ್ರತ್ಯೇಕ ನೇಮಕಾತಿ ನಡೆಸಲು ಕೇಂದ್ರ ಕಚೇರಿ ತೀರ್ಮಾನಿಸಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಕಾರಿ ವಿವೇಕಾನಂದ ಹೆಗಡೆ ಹೇಳಿದರು.
ವಿದ್ಯಾರ್ಥಿ ನಾಯಕರೊಬ್ಬ ಮಾತನಾಡಿ, ಶಾಲಾ ಕಾಲೇಜು ವಿದಾರ್ಥಿಗಳ ಬಸ್ ಪಾಸ್ ವ್ಯವಸ್ಥೆ ದಿನವಿಡೀ ಚಾಲ್ತಿಯಲ್ಲಿರಬೇಕು ಎಂದು ಆಗ್ರಹಿಸಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಲನಾ ಅಧಿಕಾರಿ ಜೈಶಾಂತ್ ಸ್ವಾಗತಿಸಿದರು. ನಿರ್ದೇಶಕರಾದ ಸುಧೀರ್‌ ಟಿ.ಕೆ., ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News