ಉಡುಪಿ: ಪೊಲೀಸರು ಆತ್ಮಹತ್ಯೆಯಂತಹ ಕೆಟ್ಟ ಕೃತ್ಯಕ್ಕೆ ಕೈಹಾಕಬಾರದು - ಜಿಲ್ಲಾಧಿಕಾರಿ ವೆಂಕಟೇಶ್

Update: 2016-10-21 13:26 GMT

ಉಡುಪಿ, ಅ.21: ಒತ್ತಡ ತಡೆಯಲಾಗದೆ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ರಾಜ್ಯದಲ್ಲಿ ಹೆಚ್ಚುತ್ತಿದೆ. ಇದಕ್ಕೆ ಬೇರೆ ಬೇರೆ ರೀತಿಯ ಬಣ್ಣ ಕಟ್ಟಿಕೊಡಲಾಗುತ್ತಿದೆ. ಪೊಲೀಸರು ಒತ್ತಡದಿಂದ ಕೆಲಸ ಮಾಡುತ್ತಿ ರುವುದು ನಿಜ. ಆದರೆ ಆತ್ಮಹತ್ಯೆಯಂತಹ ಕೆಟ್ಟ ಕೃತ್ಯಕ್ಕೆ ಮುಂದಾಗುವುದು ಸರಿಯಲ್ಲ. ಒತ್ತಡ, ಕಿರುಕುಳಗಳಿದ್ದರೆ ಬೇರೆ ಕಡೆ ವರ್ಗಾವಣೆ ಪಡೆದು ಕೊಳ್ಳಬಹುದು ಅಥವಾತಮ್ಮ ಹುದ್ದೆಗೆ ರಾಜೀನಾಮೆ ನೀಡಬಹುದು ಎಂದು ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಶುಕ್ರವಾರ ಉಡುಪಿ ಚಂದು ಮೈದಾನದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದಲ್ಲಿ ಆಯೋಜಿಸಲಾದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಪ್ರತಿಮೆಗೆ ಪುಷ್ಪಗುಚ್ಛ ಸಮರ್ಪಿಸಿ ಅವರು ಮಾತ ನಾಡುತಿದ್ದರು.

ದೇಶದ ಆಂತರಿಕ ಸುರಕ್ಷತೆಯನ್ನು ಕಾಪಾಡುವ ಪೊಲೀಸರ ತ್ಯಾಗ, ಪ್ರಾಣ ಅರ್ಪಣೆಯನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶ ದಲ್ಲಿ ಒಂದು ದಿನ ಪೊಲೀಸರು ಕರ್ತವ್ಯ ನಿರ್ವಹಿಸದಿದ್ದರೆ ಇಡೀ ಸಮಾಜ ದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತದೆ. ಆದ್ದರಿಂದ ದೇಶದಲ್ಲಿ ನೆಮ್ಮದಿ ಶಾಂತಿಯಿಂದ ಬದುಕಲು ಪೊಲೀಸರು ಅತಿಅಗತ್ಯ ಎಂದರು.

ಸುಮಾರು 25ವರ್ಷಗಳ ಹಿಂದೆ ಪೊಲೀಸರ ಬಗ್ಗೆ ನಾಗರಿಕರಿಗೆ ಭಯ ವಿತ್ತು. ಆದರೆ ಇಂದು ಆ ಪರಿಸ್ಥಿತಿ ಬದಲಾಗಿದ್ದು, ಪೊಲೀಸರು ಜನಸ್ನೇಹಿ ಯಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಯಾರು ಕೂಡ ಯಾವ ಸಂದರ್ಭ ದಲ್ಲೂ ಪೊಲೀಸ್ ಠಾಣೆಗೆ ನಿರ್ಭಯವಾಗಿ ಹೋಗಿ ತಮ್ಮ ದೂರನ್ನು ನೀಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಇಂದು ಜನ ಸುಶಿಕ್ಷತರಾದರೂ ದೇಶದ್ರೋಹಿ ಚಟುವಟಿಕೆಗಳಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದುದರಿಂದ ಇವುಗಳ ಬಗ್ಗೆ ತನಿಖೆ ನಡೆಸಲು ಪೊಲೀಸ್ ಇಲಾಖೆಯಲ್ಲಿಯೂ ಹೊಸ ತಂತ್ರಜ್ಞಾನಗಳ ಆಳವಡಿಕೆ ಅತಿಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ 2015ರ ಸೆ.1ರಿಂದ 2016ರ ಆ.31ರವರೆಗೆ ಹುತಾತ್ಮರಾದ ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಬಾಷಾ ಮುಲ್ಲಾಕಾರ್ ಹಾಗೂ ಉಡುಪಿ ಡಿಸಿಐಬಿ ಹೆಡ್‌ಕಾನ್‌ಸ್ಟೇಬಲ್ ಸಂತೋಷ್ ಸೇರಿದಂತೆ ದೇಶದ ಒಟ್ಟು 475 ಪೊಲೀಸರ ನಾಮಸ್ಮರಣೆ ಮಾಡಿದರು.

ಪರೇಡ್ ಕಮಾಂಡರ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಆರ್. ನೇತೃತ್ವದಲ್ಲಿ ಪರೇಡ್ ನಡೆಸಿ, ಮೂರು ಸುತ್ತು ಗುಂಡು ಹಾರಿಸಿ ಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಲಾಯಿತು. ಪೊಲೀಸ್ ಕಂಟ್ರೋಲ್ ರೂಂನ ಪ್ರಭಾರ ಪಿಎಸ್ಸೈ ಬಿ.ಮನಮೋಹನ್ ರಾವ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News