‘ಬರ್ಸ’ ತುಳು ಚಲನಚಿತ್ರ ಪ್ರದರ್ಶನ ಉದ್ಘಾಟನೆ
ಉಡುಪಿ, ಅ.21: ದೇವದಾಸ್ ಕಾಪಿಕಾಡ್ ನಿರ್ದೇಶನದ ‘ಬರ್ಸ’ ತುಳು ಚಲನಚಿತ್ರದ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ಉಡುಪಿಯ ಕಲ್ಪನಾ ಚಿತ್ರಮಂದಿರಲ್ಲಿ ಜರಗಿತು.
ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ತುಳು ಸಿನೆಮಾದಲ್ಲಿ ನಟನೆ ಮತ್ತು ನಿರ್ಮಾಣಕ್ಕೆ ನನಗೆ ಹಲವು ಬಾರಿ ಆಫರ್‌ಗಳು ಬಂದಿದ್ದವು. ನನ್ನ ತಂದೆ ಈ ಹಿಂದೆ ತುಳು ಸಿನೆಮಾ ಮಾಡಿ ಕೈಸುಟ್ಟುಕೊಂಡಿದ್ದರು. ಹೀಗಾಗಿ ನಾನು ಕೂಡ ಅದನ್ನು ತಿರಸ್ಕರಿಸಿದ್ದೇನೆ. ತುಳು ಸಿನೆಮಾಗಳ ಮೂಲಕ ಭಾಷೆ, ಸಂಸ್ಕೃತಿ, ಹಾಸ್ಯವನ್ನು ಜಗತ್ತಿನಾದ್ಯಂತ ವಿಸ್ತರಿಸುವ ಕಾರ್ಯ ಆಗುತ್ತಿದೆ ಎಂದರು.
ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ಇತರ ಭಾಷೆಯ ಸಿನೆಮಾಗಳಿಗೆ ಕಡಿಮೆ ಇಲ್ಲದಂತೆ ತುಳು ಸಿನೆಮಾಗಳು ಉತ್ತಮ ತಂತ್ರಜ್ಞಾನಗಳನ್ನು ಬಳಸಿಕೊಂಡು ಯಶಸ್ವಿಯಾಗುತ್ತಿವೆ. ಈಗಾಗಲೇ ಒಂಭತ್ತು ಕೇಂದ್ರಗಳಲ್ಲಿ ಬಿಡುಗಡೆಯಾಗಿರುವ ಈ ಸಿನೆಮಾ ಇಂದು ನಾಲ್ಕು ಕಡೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್, ಪ್ರೈಮ್ ಟಿವಿಯ ನಿರ್ದೇಶಕ ದಿನೇಶ್ ಕಿಣಿ, ಉದ್ಯಮಿ ಸಂತೋಷ್ ಶೆಟ್ಟಿ, ಕಲ್ಪನಾ ಚಿತ್ರಮಂದಿರದ ಚಂದ್ರಶೇಖರ್ ಹೊಳ್ಳ ಭಾಗವಹಿಸಿದ್ದರು. ನಿರ್ಮಾಪಕರಾದ ಶರ್ಮಿಳಾ ಡಿ.ಕಾಪಿಕಾಡ್, ಮುಖೇಶ್ ಹೆಗ್ಡೆ, ಸ್ವಪ್ನ ಶ್ರೀನಿವಾಸ್ ಕಿಣಿ, ನಟ ಅರ್ಜುನ್ ಕಾಪಿಕಾಡ್, ಸಚಿನ್ ಉಪ್ಪಿನಂಗಡಿ ಉಪಸ್ಥಿತರಿದ್ದರು. ಅನುರಾಗ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.