×
Ad

ಆರೋಗ್ಯ ರಕ್ಷಾ ಸಮಿತಿ : ಅನುದಾನ ಖರ್ಚು ಲೆಕ್ಕಪತ್ರದಲ್ಲಿ ಅವ್ಯವಹಾರ ಬಹಿರಂಗ

Update: 2016-10-21 19:13 IST

ಪುತ್ತೂರು,ಅ.21: ಸರ್ಕಾರಿ ಆಸ್ಪತ್ರೆಗೆ ಮಂಜೂರಾದ ಅನುದಾನದ ಲೆಕ್ಕ ಪತ್ರದಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವುದು ಶುಕ್ರವಾರ ನಡೆದ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಬೆಯಲ್ಲಿ ಬಹಿರಂಗಗೊಂಡಿದೆ. ಈ ಬಗ್ಗೆ ತಕ್ಷಣವೇ ಶಿಸ್ತು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಉಪವಿಬಾಗಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳು ಸರಿಯಾದ ಲೆಕ್ಕಪತ್ರವಿಲ್ಲದೆ ಅನುದಾನವನ್ನು ಬಳಕೆ ಮಾಡಿಕೊಂಡಿರುವುದು ಸಭೆಯಲ್ಲಿ ಬೆಳಕಿಗೆ ಬಂದಿದೆ.

ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ನೇತೃತ್ವದಲ್ಲಿ ಆಸ್ಪತ್ರೆಯ ರಕ್ಷಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಜಮಾ ಖರ್ಚುಗಳ ವಿವರಗಳ ಮಾಹಿತಿ ಸಂದರ್ಭದಲ್ಲಿ ದ್ವಿತೀಯ ದರ್ಜೆ ಸಹಾಯಕ ಕಿರಣ್ ಮತ್ತು ಇನ್ನೋರ್ವ ಸಿಬ್ಬಂದಿ ಆಸ್ಪತ್ರೆಯ ಜನ್‌ರಲ್ ಎಕೌಂಟೆಂಟ್ ಯೋಗಾನಂದ ಎಂಬವರು ಸರ್ಕಾರಿನಿಯಮಾವಳಿಯನ್ನು ಮೀರಿ ಖರ್ಚು ಮಾಡಿದ್ದು, ಈ ಪೈಕಿ ಕಿರಣ್ ತನ್ನ ತಪ್ಪನ್ನು ಒಪ್ಪಿಕೊಂಡು ಹಣವನ್ನು ಮರು ಪಾವತಿಸುವುದಾಗಿ ಲಿಖಿತ ಹೇಳಿಕೆ ನೀಡಿದರು.

 ಸಭೆಯಲ್ಲಿ ವಿಷಯದ ಬಗ್ಗೆ ಪ್ರಶ್ನಿಸಿದ ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಅವರು ಎರಡು ವರ್ಷಗಳ ಹಿಂದಿನ ವಾರ್ಷಿಕ ವರದಿಯಲ್ಲಿ ಉಲ್ಲೇಖಿತವಾಗಿರುವ ಖರ್ಚುಗಳಲ್ಲಿ ರೂ. 1.5 ಹಣ ಏನಾಗಿದೆ ಎಂಬುದು ಗೊತ್ತಾಗಿಲ್ಲ. ದ್ವಿತೀಯ ದರ್ಜೆ ಸಹಾಯಕ ಕಿರಣ್ ಇದನ್ನು ಬಳಕೆ ಮಾಡಿರುವ ಬಗ್ಗೆ ಮಾಹಿತಿಯಿದ್ದು, ಇದೊಂದು ಗಂಭೀರ ಮತ್ತು ಕ್ರಿಮಿನಲ್ ಪ್ರಕರಣವಾಗಿದ್ದು, ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಅವರ ಮೇಲೆ ಯಾಕೆ ಕಾನೂನು ಕ್ರಮ ಕೈಗೊಂಡಿಲ್ಲ. ಅವರನ್ನು ಯಾಕೆ ವಜಾಗೊಳಿಸಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಈ ಬಗ್ಗೆ ಕ್ರಮ ಕೈಗೊಂಡು ತಕ್ಷಣವೇ ವರದಿ ನೀಡುವಂತೆ ಸೂಚಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ಭಟ್ ಅವರು ಕಿರಣ್ ಅವರು ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ತನಗೆ ಅನಾರೋಗ್ಯವಿರುವ ಕಾರಣಗಳಿಂದ ಲೆಕ್ಕಾಚಾರಗಳನ್ನು ನೀಡುವಾಗ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ವಾರದ ಒಳಗಾಗಿ ಹಣವನ್ನು ಮರುಪಾವತಿ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಸರ್ಕಾರ ಹಣದ ವಿಚಾರದಲ್ಲಿ ಅನಾರೋಗ್ಯ ಇನ್ನಿತರ ಕಾರಣಗಳನ್ನು ಹೇಳುವಂತಿಲ್ಲ. ಹಣ ದುರುಪಯೋಗ ಶಿಕ್ಷಾರ್ಹ ಅಪರಾಧ ಎಂದ ಉಪವಿಭಾಗಾಧಿಕಾರಿಗಳು ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಕಳೆದ 2 ವರ್ಷಗಳ ವಾರ್ಷಿಕ ವರದಿಯನ್ನು ಶಾಸಕಿ ಮತ್ತು ಉಪವಿಬಾಗಾಧಿಕಾರಿಗಳು ಪ್ರಶ್ನಿಸಿದಾಗ ಅದರಲ್ಲಿಯೂ ಸಾಕಷ್ಟು ಲೋಪಗಳು ಕಂಡು ಬಂದಿದ್ದು, ಆಸ್ಪತ್ರೆಯ ಜನ್‌ರಲ್ ಎಕೌಟೆಂಟ್ ಯೋಗಾನಂದ ಎಂಬವರು ಸರ್ಕಾರದ ಸುತ್ತೋಲೆಯನ್ನು ಮೀರಿ ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂದಿತ್ತು. ಸರ್ಕಾರದ ಸುತ್ತೋಲೆಯಲ್ಲಿ ರೂ. 5 ಸಾವಿರಕ್ಕಿಂತ ಅಧಿಕ ಖರ್ಚುಗಳನ್ನು ಮಾಡಲು ಉಪವಿಬಾಗಾಧಿಕಾರಿಗಳ ಅನುಮೋದನೆ, ರೂ. 25ಸಾವಿರಕ್ಕಿಂತ ಅಧಿಕ ಖರ್ಚು ಮಾಡಲು ಆಸ್ಪತ್ರೆ ರಕ್ಷಾ ಸಮಿತಿಯ ಅನುಮೋದನೆ ಹಾಗೂ ರೂ. 2 ಲಕ್ಷಕ್ಕಿಂತ ಅಧಿಕ ಖರ್ಚು ಮಾಡಲು ಶಾಸಕಿ ಅವರ ಅನುಮೋದನೆ ಪಡೆಯಬೇಕಾಗಿತ್ತು. ಅದರೆ ಇದೆಲ್ಲವನ್ನೂ ಮೀರಿ ಹಣವನ್ನು ಖರ್ಚು ಮಾಡಲಾಗಿತ್ತು. ಮತ್ತು ಈ ಬಗ್ಗೆ ಸರಿಯಾದ ದಾಖಲೆಗಳೂ ಲಭ್ಯವಿರಲಿಲ್ಲ. ಈ ಬಗ್ಗೆ ತೀವ್ರ ಆಕ್ರೋಶಿತರಾದ ಉಪವಿಭಾಗಾಧಿಕಾರಿಗಳು ಸರ್ಕಾರದ ಹಣವನ್ನು ತಮಗಿಷ್ಟ ಬಂದಂತೆ ಖರ್ಚು ಮಾಡಿರುವುದಕ್ಕೆ ತರಾಟೆಗೆತ್ತಿಕೊಂಡರು. ಖರ್ಚು ಮಾಡಿರುವ ಸಂಪೂರ್ಣ ವಿವರಗಳನ್ನು ಮುಂದಿನ ಸಭೆಯಲ್ಲಿ ಸಲ್ಲಿಸುವಂತೆ ಸೂಚನೆ ನೀಡಿದರು. ಸುತ್ತೋಲೆಯನ್ನು ಮೀರಿ ಹಣ ಬಳಕೆಯಾಗಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

 ಆಸ್ಪತ್ರೆಯ ಅಭಿವೃದ್ಧಿಗೆ ಮಂಜೂರಾಗಿರುವ ಅನುದಾನವನ್ನು ಇತರ ಉದ್ದೇಶಗಳಿಗೆ ಬಳಸದೆ ಅಗತ್ಯತೆಯನ್ನು ಪೂರೈಸುವಂತೆ ಸೂಚನೆ ನೀಡಿದ ಉಪವಿಭಾಗಾಧಿಕಾರಿಗಳು ಹೆಚ್ಚುವರಿ ಸಿಬ್ಬಂದಿಗಳ ಬೇಡಿಕೆಯನ್ನು ಮುಂದಿಡುವ ಬದಲು ಇರುವ ಸಿಬ್ಬಂದಿಗಳನ್ನು ಚೆನ್ನಾಗಿ ತೊಡಗಿಸಿಕೊಳ್ಳಿ ಎಂದರು. ಆಸ್ಪತ್ರೆಯ ಸಣ್ಣ ಪುಟ್ಟ ಕಾಮಗಾರಿಗಳನ್ನು ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು ಎಂದ ಅವರು ಆಸ್ಪತ್ರೆಯ ಕಸ ತ್ಯಾಜ್ಯ ವಿಲೇವಾರಿಗೆ ರಿಯಾಯಿತಿ ಶುಲ್ಕ ವಿಧಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು.

 ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ. ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ, ನಗರ ಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು, ಜಿಲ್ಲಾ ಆರೋಗ್ಯ ನಿರೀಕ್ಷಕ ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರದೀಪ್, ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾದ ನಯನ ರೈ, ಚಂದ್ರಶೇಖರ್, ಅಬ್ದುಲ್ ರಹಿಮಾನ್ ಆಝಾದ್, ಪೌರಾಯುಕ್ತೆ ರೂಪಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News