×
Ad

ಉಜಿರೆಯಲ್ಲಿ ವೀರಯೋಧರ ಹುತಾತ್ಮ ದಿನಾಚರಣೆ

Update: 2016-10-21 19:26 IST

ಬೆಳ್ತಂಗಡಿ,ಅ.21: ನಾವು ನೆಮ್ಮದಿಯ ಬದುಕು ನಡೆಸಲು ಸೈನಿಕರು ಮತ್ತು ಪೋಲಿಸರು ಮಾಡುವ ಸೇವೆ ಮಹತ್ವದ್ದಾಗಿದೆ. ಸಮಸ್ಯೆ ಬಂದಾಗ ಮಾತ್ರ ಇವರ ನೆನಪಾಗುತ್ತದೆ. ಸದಾ ಜನರಿಗಾಗಿ ತಮ್ಮ ಬದುಕಿನ ನೆಮ್ಮದಿಯನ್ನು ಬದಿಗಿರಿಸಿ ಕಾರ್ಯ ನಿರ್ವಹಿಸುವ ಇವರನ್ನು ನಾವು ಸದಾ ಗೌರವಿಸಬೇಕು ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ ಯಶೋವರ್ಮ ಹೇಳಿದರು.

ಅವರು ಶುಕ್ರವಾರ ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕಾಲೇಜಿನಲ್ಲಿ ದ.ಕ. ಜಿಲ್ಲಾ ಪೋಲಿಸ್ ಇಲಾಕಾ ವತಿಯಿಂದ ಪೋಲಿಸ್ ಹುತಾತ್ಮರ ದಿನಾಚರಣೆ ಅಂಗವಾಗಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರಯೋಧ ಮೋಹನ್ ದಾಸನ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ನಡಿನಮನ ಸಲ್ಲಿಸಿ ಮಾತನಾಡಿದರು.

ನಮ್ಮ ನಾಡಿನಲ್ಲಿ ಯಾವುದೇ ಸಮಸ್ಯೆಗಳನ್ನು ಸೃಷ್ಠಿಸದೇ ಬದುಕುವ ಮೂಲಕ ಸಮಸ್ಯೆಯನ್ನು ಮುಕ್ತವಾಗಿಸಿ, ಭದ್ರವಾಗಿಸಬಹುದು. ಆಗ ಸೈನಿಕರ ಹಾಗೂ ಪೋಲಿಸರ ಒತ್ತಡ ಕಡಿಮೆಯಾಗುತ್ತದೆ ಎಂದರು.

ದ,ಕ. ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ವೇದಮೂರ್ತಿ ಅವರು, ಯುವಕರು ಸೇನೆ ಹಾಗೂ ಪೋಲಿಸ್ ಇಲಾಖೆಯಲ್ಲಿ ಸೇವೆ ನಿರ್ವಹಿಸಲು ಹೆಚ್ಚು ಆಸಕ್ತಿ ತೋರಿಸಬೇಕಾಗಿದೆ. ದೇಶದಲ್ಲಿ 473 ಮಂದಿ, ರಾಜ್ಯದಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮ ದಿನಾಚರಣೆಯಂದು ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರ ಯೋಧರನ್ನು ನೆನೆಯುವ ಅಗತ್ಯ ಇದೆ ಎಂದರು.

ಹುತಾತ್ಮ ವೀರ ಯೋಧ ಮೋಹನ್ ದಾಸನ್ ಅವರ ತಂದೆ ಎ.ಕೆ. ವಿಟ್ಟಮಾನ್ ತಾಯಿ ವಿ. ಆರ್. ಮಾಧವಿ ದೀಪ ಬೆಳಗಿಸಿ, ಪುಷ್ಪಾಂಜಲಿ ಅರ್ಪಿಸಿದರು.

ಮೋಹನ್ ದಾಸನ್ ಅವರು ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ 1991ರಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಗೆ ಆಯ್ಕೆಯಾಗಿ ನಾಗಾಲ್ಯಾಂಡ್, ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ, 1998ರಲ್ಲಿ ಮಣಿಪುರದಲ್ಲಿ ಉಗ್ರಗಾಮಿಗಳೊಂದಿಗೆ ನಡೆದ ಮುಖಾಮುಖಿಯಲ್ಲಿ ವೀರ ಮರಣವನ್ನು ಹೊಂದಿದ್ದರು.

 ಎಸ್‌ಡಿಎಂ ಪಿಯು ಕಾಲೇಜಿನ ಪ್ರಾಚಾರ್ಯ ದಿನೇಶ್ ಚೌಟ, ಬೆಳ್ತಂಗಡಿ ನಗರ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಕಾಂಚೋಡು, ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್, ನಿವೃತ್ತ ಸೈನಿಕ ಸುನೀಲ್ ಶೆಣೈ, ಮೋಹನ್ ಅವರ ಸಂಬಂಧಿ ಎ.ಕೆ. ಶಿವನ್

ಬೆಳ್ತಂಗಡಿ ಎಸ್‌ಐ ರವಿ ಬಿ. ಎಸ್., ಧರ್ಮಸ್ಥಳ ಎಸ್‌ಐ ಮಾಧವ ಕೂಡ್ಲು ಮೊದಲಾದವರು ಇದ್ದರು. ವಿದ್ಯಾರ್ಥಿಗಳಾದ ಗಣೇಶ್ ಹಾಗೂ ಪವಿತ್ರ ವೀರಯೋಧರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಡಾ.ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News