ಸ್ಕಿಲ್ ಗೇಮ್ ಜೂಜು ಅಡ್ಡೆಗಳ ವಿರುದ್ಧ ಡಿವೈಎಫ್‌ಐ ಪ್ರತಿಭಟನೆ
ಮಂಗಳೂರು, ಅ. 21: ಕೂಳೂರು ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಸ್ಕಿಲ್ ಗೇಮ್ ಅಕ್ರಮ ಜೂಜು ಕೇಂದ್ರಗಳನ್ನು ಮುಚ್ಚಲು ಒತ್ತಾಯಿಸಿ ಡಿವೈಎಫ್‌ಐ ಪಂಜಿಮೊಗರು ಘಟಕದ ನೇತೃತ್ವದಲ್ಲಿ ಇಂದು ಕೂಳೂರು ಜಂಕ್ಷನ್ ಬಳಿ ಪ್ರತಿಭಟನೆ ನಡೆಯಿತು
ಡಿವೈಎಫ್‌ಐ ಜಿಲ್ಲಾದ್ಯಕ್ಷ ದಯಾನಂದ ಶೆಟ್ಟಿ ಮಾತನಾಡಿ, ಕೂಳೂರು ಪ್ರದೇಶವು ಇತ್ತೀಚಿಗೆ ಅನೇಕ ಕುಕೃತ್ಯಗಳಿಗೆ ಒಳಗಾಗುತ್ತಿದೆ. ಸ್ಕಿಲ್‌ಗೇಮ್‌ಗೆ ಬಲಿಯಾಗಿ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿದೆ. ಸ್ಕಿಲ್ ಗೇಮ್ ಹೆಸರಿನಲ್ಲಿ ಜೂಜು ಕೇಂದ್ರಗಳಿಗೆ ಅನುಮತಿ ನೀಡುವ ಕುರಿತು ಮ.ನಾ.ಪ. ಪುನರ್ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಉಪಾದ್ಯಕ್ಷ ಬಿ.ಕೆ ಇಮ್ತಿಯಾಝ್, ಸ್ಕಿಲ್ ಗೇಮ್ ಎಂಬ ಹೆಸರಿನಲ್ಲಿ ಜೂಜಾಟ ನಡೆಯುತ್ತಿದೆ ಈ ಬಗ್ಗೆ ಪೂಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮತನಾಡಿ, ಜಿಲ್ಲೆಯಲ್ಲಿ ಹೊಸ ಮಾದರಿಯ ಜೂಜು ಕೇಂದ್ರಗಳು ತಲೆ ಎತ್ತುತ್ತಿವೆ. ಇವುಗಳು ಸಮಾಜ ಘಾತುಕ ಕೃತ್ಯಗಳಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಪೋಲೀಸ್ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಕಾರರು ಸಹಾಯಕ ಪೂಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡರಾದ ಆಶಾ, ಪ್ರಮೀಳಾ, ಶ್ರೀಯಾನ್, ಸಾದಿಕ್, ಉಸ್ಮಾನ್, ಅಶೋಕ್, ಡಿ.ವೈ.ಎಫ್.ಐ ಪಂಜಿಮೊಗರು ಘಟಕದ ಅಧ್ಯಕ್ಷ ನೌಶಾದ್, ಅನಿಲ್ ಡಿಸೂಜಾ, ಇಬ್ರಾಹೀಂ ಖಲೀಲ್ , ಸಂತೋಷ್, ಚರಣ್, ನಿಯಾಝ್, ಬಶೀರ್,ಹನುಮಂತ, ರಿಯಾಝ್, ಮತ್ತಿತರರು ಉಪಸ್ಥಿತರಿದ್ದರು.