ರಾಜ್ಯ ಸರಕಾರದ ಜನಪರ ಯೋಜನೆಗಳಿಗೆ ಮುಕ್ತಕಂಠದ ಪ್ರಶಂಸೆ
ಮಣಿಪಾಲ, ಅ.21: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಕಳೆದ ಮೂರೂವರೆ ವರ್ಷಗಳ ತನ್ನ ಆಡಳಿತಾವಧಿಯಲ್ಲಿ ಜಾರಿಗೆ ತಂದಿರುವ ವಿವಿಧ ಜನಪರ ಯೋಜನೆಗಳಿಗೆ ಉಡುಪಿ ಜಿಲ್ಲೆಯ ಫಲಾನುಭವಿಗಳಿಂದ ಮುಕ್ತಕಂಠದ ಪ್ರಶಂಸೆ ವ್ಯಕ್ತವಾಗಿದೆ.
ಜಿಲ್ಲಾಡಳಿತ ಹಾಗೂ ಉಡುಪಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ಆಶ್ರಯದಲ್ಲಿ ಸರಕಾರದ ಯೋಜನೆಗಳ ಫಲಾನುಭವಿ ಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಸಿದ ‘ಜನಮನ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಯ್ದ ಫಲಾನುಭವಿಗಳು ಈ ಯೋಜನೆಯಿಂದ ತಾವು ಬದುಕು ಕಟ್ಟಿಕೊಂಡ ಪರಿಯನ್ನು ಮನಪೂರ್ವಕವಾಗಿ, ಕೃತಜ್ಞತಾ ಭಾವನೆಗಳಿಂದ ವಿವರಿಸಿದರು.
ಕಾರ್ಯಕ್ರಮದಲ್ಲಿ ಸರಕಾರದ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಅರಿವು, ಕೃಷಿ ಭಾಗ್ಯ, ಕ್ಷೀರಧಾರೆ,ಮನಸ್ವಿನಿ, ಮೈತ್ರಿ, ಗಂಗಾಕಲ್ಯಾಣ, ವಿವಿಧ ವಸತಿ ಯೋಜನೆಗಳು ಹಾಗೂ ಸಹಕಾರಿ ಕ್ಷೇತ್ರಗಳ ಫಲಾನುಭವಿಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ನಿರ್ಭಿಡೆಯಿಂದ ಸೇರಿದ ಜನರಿಗೆ ವಿವರಿಸಿದ ರಲ್ಲದೇ, ಸರಕಾರದಿಂದ ತಮ್ಮ ನಿರೀಕ್ಷೆಗಳನ್ನು ಹಂಚಿಕೊಂಡರು.
ಅದರಲ್ಲೂ ಅನ್ನಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ, ಗಂಗಾಕಲ್ಯಾಣ ಯೋಜನೆಗಳ ಫಲಾನುಭವಿಗಳು ವಿಶೇಷವಾಗಿ ವಿದ್ಯಾರ್ಥಿಗಳು ಸರಕಾರದ ನೆರವಿನಿಂದ ತಮ್ಮ ಬದುಕು ಹಸನಾಗಿರುವುದು, ತಮ್ಮ ನಿರ್ದಿಷ್ಟ ಗುರಿಯತ್ತ ಸಾಗಲು ಸಾಧ್ಯವಾಗಿರುವುದನ್ನು, ಆಗಿರುವ ಬದಲಾವಣೆಗಳನ್ನು ವಿವರಿಸಿದರು.
ಸಚಿವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷ ನಳಿನ್ ಪ್ರದೀಪ್‌ರಾವ್ ಹಾಗೂ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು.
ಮನೆಯೊಂದನ್ನು ನೀಡಿ:ಮೊದಲು ಅನ್ನಭಾಗ್ಯದ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪರ್ಕಳದ ಲಲಿತ ಪ್ರಭು ಮೊದಲು ಮಾತನಾಡಿ, ಸಿದ್ಧರಾಮಯ್ಯ ಸರಕಾರ ನೀಡುತ್ತಿರುವ 30 ಕೆ.ಜಿ.ಉಚಿತ ಅಕ್ಕಿ ಹಾಗೂ ಸಕ್ಕರೆ, ಎಣ್ಣೆ, ಉಪ್ಪು ಹಾಗೂ ಇತರ ವಸ್ತುಗಳಿಂದ ತನಗೀಗ ತುಂಬಾ ಅನುಕೂಲವಾಗಿದ್ದು, ಮೊದಲು ಅನಾರೋಗ್ಯದ ನಡುವೆಯೂ ಪ್ರತಿದಿನ ಐದಾರು ಮನೆಗಳಿಗೆ ಕೆಲಸ ಹೋಗುತಿದ್ದ ನಾನೀಗ ಎರಡು ಮನೆಗಳ ಕೆಲಸಕ್ಕೆ ಮಾತ್ರ ಹೋಗುತಿದ್ದೇನೆ. ಸರಿಯಾದ ಆಹಾರ ಸೇವನೆಯಿಂದ ನನ್ನ ಆರೋಗ್ಯದಲ್ಲೂ ಈಗ ಸುಧಾರಣೆಯಾಗಿದೆ ಎಂದು ಲಲಿತ ಪ್ರಭು ನುಡಿದರು.
ತಾನೀಗ ಕೋಳಿಗೂಡಿನಂಥ ಬಾಡಿಗೆ ಮನೆಯಲ್ಲಿದ್ದು, ನನಗೆ ಯಾರೂ ದಿಕ್ಕಿಲ್ಲ. ಸ್ವಂತ ಮನೆಯೊಂದು ನನ್ನ ಕನಸಾಗಿದ್ದು, ಇದಕ್ಕಾಗಿ ಅರ್ಜಿಯನ್ನೂ ಹಾಕಿರುವುದಾಗಿ ತಿಳಿಸಿದರು. ಸಚಿವರು ಸಂಬಂಧಿತ ಅಧಿಕಾರಿಗಳಿಗೆ ಅವರಿಗೆ ಮನೆ ನಿವೇಶನ ಹಾಗೂ ವಸತಿ ಸೌಲಭ್ಯ ನೀಡುವಂತೆ ಸೂಚಿಸಿದರು.
ಮಣಿಪಾಲದ ಮಾಲತಿ ಅವರು ಕಳೆದ ಮೂರು ವರ್ಷಗಳಿಂದ ತನಗೆ ಉಚಿತ 30ಕೆ.ಜಿ. ಅಕ್ಕಿ ಹಾಗೂ ಇತರ ವಸ್ತು ಸಿಗುತಿದ್ದು, ಇತ್ತೀಚೆಗೆ ಜಾರಿಗೆ ತಂದ ಕೂಪನ್ ವ್ಯವಸ್ಥೆಯಿಂದ ತನಗೆ ತುಂಬಾ ಅನುಕೂಲವಾಗಿದೆ ಹಾಗೂ ಇದರಿಂದ ಯೋಜನೆಯ ದುರ್ಬಳಕೆ ನಿಲ್ಲಲಿದೆ ಎಂದರು. ತೆಕ್ಕಟ್ಟೆಯ ಸತೀಶ್ ಅನ್ನಭಾಗ್ಯ ಯೋಜನೆಯ ಮಹತ್ವ ಹಸಿವಿನ ಅನುಭವವಿದ್ದವರಿಗೆ ಮಾತ್ರ ತಿಳಿಯುತ್ತದೆ, ಹೊಟ್ಟೆ ತುಂಬಿದವರಿಗಲ್ಲ. ಯೋಜನೆಯಿಂದ ಉಳಿತಾಯವಾದ ಹಣದಿಂದ ತನ್ನ ತಂಗಿಯರಿಗೆ ವಿದ್ಯಾಭ್ಯಾಸ ನೀಡಲು ಸಾಧ್ಯವಾಗುತ್ತಿದೆ ಎಂದರು.
ಕ್ಷೀರಭಾಗ್ಯ: ಶಾಲಾ ಮಕ್ಕಳಿಗೆ ಹಾಲು ನೀಡುವ ಕ್ಷೀರಭಾಗ್ಯ ಯೋಜನೆಯ ಬ್ರಹ್ಮಾವರ, ಬೈಲೂರು, ಪಡುಬಿದ್ರಿ ಸರಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಯೋಜನೆಯಿಂದ ತಮಗಾದ ಅನುಕೂಲತೆಗಳನ್ನು ತಮ್ಮದೇ ಮಾತುಗಳಲ್ಲಿ ಬಣ್ಣಿಸಿದರು. ಈಗ ಮೂರು ದಿನ ನೀಡುವ ಹಾಲನ್ನು ಆರು ದಿನ ನೀಡುವಂತೆ ಮನವಿ ಮಾಡಿದರು. ಸರಕಾರ ಈಗ ಐದು ದಿನ ನೀಡಲು ನಿರ್ಧರಿಸಿದ್ದು, ಶನಿವಾರವೂ ನೀಡುವಂತೆ ಮುಖ್ಯಮಂತ್ರಿ ಬಳಿ ಮಾತನಾಡುತ್ತೇನೆ ಎಂದು ಪ್ರಮೋದ ಭರವಸೆ ನೀಡಿದರು.
ಕೃಷಿ ಇಲಾಖೆಯ ವಿವಿಧ ಯೋಜನೆಗಳಿಂದ ಕೃಷಿಯಿಂದ ವಿಮುಖನಾಗಿ ಮಂಗಳೂರಿಗೆ ತೆರಳಿದ್ದ ತಾನು ಮತ್ತೆ ಊರಿಗೆ ಮರಳಿ ಎರಡೆಕರೆಯಲ್ಲಿ ಕೃಷಿ ಮಾಡಿ ನೆಮ್ಮದಿಯ ಬದುಕು ಸಾಗಿಸುತಿದ್ದೇನೆ ಎಂದು ಗಂಗೊಳ್ಳಿಯ ವಿಜಯ ತಿಳಿಸಿದರು. ಇದೀಗ ಯಂತ್ರೋಕರಣ ಪಡೆದು ಹಡಿಲು ಗದ್ದೆಗಳನ್ನು ಪಡೆದು ಬೇಸಾಯ ಮಾಡುತ್ತಿರುವುದಾಗಿ ನುಡಿದರು. ವಿಜಯ್ ನಮ್ಮೆಲ್ಲಾ ಯುವಕರಿಗೆ ಮಾದರಿಯಾಗಬೇಕೆಂದು ಪ್ರಮೋದ್ ತಿಳಿಸಿದರು.
ಸಿದ್ಧಾಪುರದ ಶಂಕರ ಶೆಟ್ಟಿ, ಪಲಿಮಾರಿನ ಬಾಲಕೃಷ್ಣ ಶೆಟ್ಟಿ ಅವರೂ ಸರಕಾರಿ ಯೋಜನೆಗಳಿಂದ ಪಡೆದ ಲಾಭದಿಂದ ನೆಮ್ಮದಿ ಜೀವನ ಸಾಗಿಸುತ್ತಿರುವುದನ್ನು ವಿವರಿಸಿದರು.
ಪ್ರೋತ್ಸಾಹಧನ ಶೀಘ್ರ: ಪಶುಸಂಗೋಪನಾ ಇಲಾಖೆಯ ‘ಕ್ಷೀರಧಾರೆ’ ಯೋಜನೆಯ ಫಲಾನುಭವಿಗಳು ಕಳೆದ ಐದು ತಿಂಗಳಿನಿಂದ ಹಾಲು ಲೀ.ಗೆ ಸಿಗುವ 4ರೂ. ಪ್ರೋತ್ಸಾಹಧನ ಬಾರದಿರುವ ಬಗ್ಗೆ ತಿಳಿಸಿದ್ದು, ಸಚಿವರು ತಕ್ಷಣವೇ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರೊಂದಿಗೆ ಮಾತನಾಡಿದಾಗ ಇನ್ನೊಂದು ವಾರದೊಳಗೆ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಾಕುವ ಭರವಸೆ ನೀಡಿದರು.
ಅದೇ ರೀತಿ ವಿದ್ಯಾಸಿರಿ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳು ಸರಕಾರ ನೀಡುವ ಹಣದಿಂದ ತಮ್ಮ ವಿದ್ಯಾಭ್ಯಾಸ ನಡೆಯುತ್ತಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡರು. ಪಿಐಎಂನ ಮಾನಸ, ಅನುಷಾ, ಸಂದೀಪ್, ನಿಟ್ಟೆ ಇಂಜಿನಿಯರಿಂಗ ಕಾಲೇಜಿನ ಸುದೀಪ್ ಇದರಲ್ಲಿ ಭಾಗವಹಿಸಿದ್ದರು.
ಮನಸ್ವಿನಿ-ಮೈತ್ರಿ ಯೋಜನೆಯ ಫಲಾನುಭವಿಗಳಾದ ಸಂಜೀವ್ ವಂಡ್ಸೆ, ಲಾವಣ್ಯ, ಅಶ್ವಿಜ್, ಮೇರಿ ಪರ್ಕಳ, ಭಾರತಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅದೇ ರೀತಿ ಸಹಕಾರ ಕ್ಷೇತ್ರದ ಫಲಾನುಭವಿಗಳು ಸಹ ತಮ್ಮ ಬದುಕು ಹೇಗೆ ಹಸನಾಗಿದೆ ಎಂಬುದನ್ನು ವಿವರಿಸಿದರು.
ಕೊನೆಯಲ್ಲಿ ಮಾತನಾಡಿದ ಪ್ರಮೋದ್, ಸರಕಾರದ ಯೋಜನೆಗಳ ವೌಲ್ಯಮಾಪನಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ಜನರ ತೆರಿಗೆ ಹಣದಿಂದಲೇ ನಡೆಯುವ ಯೋಜನೆ. ಇದರ ಸದುಪಯೋಗ ಎಷ್ಟಾಗಿದೆ ಎಂಬುದನ್ನು ತಿಳಿಯಲು ಸಂವಾದ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲೇ ಪ್ರಥಮವಾಗಿ ಉಡುಪಿ ಜಿಲ್ಲೆಯಲ್ಲಿ 7-8 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಮನೆಯನ್ನು ನೀಡಲಾಗಿದೆ. ಅವರಿಗೆ ಇದೇ ಮೊದಲ ಬಾರಿ ಜಿಲ್ಲಾ ಪ್ರಶಸ್ತಿಯನ್ನೂ ನೀಡಲಾಗಿದೆ. ಇದು ಅವರಿಗೆ ಆತ್ಮಗೌರವವನ್ನು ನೀಡುವುದರೊಂದಿಗೆ, ಸಮಾಜದ ಮುಖ್ಯವಾಹಿನಿಗೆ ಬರಲು ಧೈರ್ಯ ನೀಡುತ್ತದೆ
ಸಂಜೀವ ವಂಡ್ಸೆ, ಮೈತ್ರಿ ಯೋಜನೆಯ ಫಲಾನುಭವಿ
ಗಂಗಾ ಕಲ್ಯಾಣ ಯೋಜನೆಯಿಂದ ದೊರೆತ 1.5ಲಕ್ಷ ರೂ.ನೆರವಿನಿಂದ ನಾನೀಗ ಬಾವಿ ತೋಡಿದ್ದು, ಇದರ ಧಾರಾಳ ನೀರಿನಿಂದ ನನ್ನ 4 ಎಕರೆ ಜಾಗದಲ್ಲಿ ಕೃಷಿಯೊಂದಿಗೆ ತೋಟವನ್ನುಅಭಿವೃದ್ಧಿಪಡಿಸಲು ಸ್ಯಾವಾಗಿದೆ.
ಯಶೋಧ ಪೆರ್ಡೂರು, ಗಂಗಾ ಕಲ್ಯಾಣ ಯೋಜನೆ ಫಲಾನುಭವಿ
ಸರಕಾರದ ವಿದ್ಯಾಸಿರಿ ಯೋಜನೆಯಿಂದ ದೊರೆಯುವ ಹಣದಿಂದ ಮಂದಾರ್ತಿಯಂಥ ಗ್ರಾಮೀಣ ಭಾಗದಿಂದ ಬಂದ ಬಡ ಕೃಷಿಕನ ಮಗನಾದ ನಾನು ನಿಟ್ಟೆಯಲ್ಲಿ ಇಂಜಿನಿಯರಿಂಗ್ ಕಲಿಯಲು ಸಾಧ್ಯವಾಗಿದೆ.
ಪ್ರದೀಪ್, ವಿದ್ಯಾಸಿರಿ ಯೋಜನೆಯ ಫಲಾನುಭವಿ.