ಕೊಲ್ಲೂರು ದರೋಡೆ: ಇಬ್ಬರು ದರೋಡೆಕೋರರ ಬಂಧನ
ಕೊಲ್ಲೂರು, ಅ.21: ಕೊಲ್ಲೂರು -ಸಾಗರ ಹೆದ್ದಾರಿಯ ದಳಿ ಎಂಬಲ್ಲಿ ಅ.20ರಂದು ಬೈಕ್ ಸವಾರರನ್ನು ತಡೆದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.
ಕೊಲ್ಲೂರು ಗ್ರಾಮದ ಸುಬ್ಬರಸನ ತೊಪ್ಲುವಿನ ಉದಯ ಶೇರುಗಾರ(49) ಎಂಬವರು ಬೆಳಗ್ಗೆ 9:45ರ ಸುಮಾರಿಗೆ ತನ್ನ ಬೈಕಿನಲ್ಲಿ ಕೊಲ್ಲೂರು ಕಡೆ ಯಿಂದ ದಳಿ ಕಡೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಕೆಎ14ಎ6593 ನಂಬರಿನ ಇನ್ನೋವಾ ಕಾರಿನಲ್ಲಿ ಬಂದ ಆರು ಮಂದಿ ಬೈಕನ್ನು ಅಡ್ಡಗಟ್ಟಿದರು. ಬಳಿಕ ಅವರೆಲ್ಲರು ಸೇರಿ ಉದಯ ಶೇರುಗಾರಿಗೆ ಕೈ ಹಾಗೂ ರಾಡಿನಿಂದ ಹಲ್ಲೆ ನಡೆಸಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ದ್ವಿಚಕ್ರವಾಹನದ ಕೀ, ಅಂಗಿಯ ಕಿಸೆಯಲ್ಲಿದ್ದ ಎಂಟು ಸಾವಿರ ರೂ. ವೌಲ್ಯದ ಮೊಬೈಲ್, 1,000ರೂ. ನಗದನ್ನು ಕಸಿದುಕೊಂಡು ಪರಾರಿಯಾದರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ದರೋಡೆಗೈದ ಆರು ಮಂದಿಗಳ ಪೈಕಿ ಭದ್ರಾವತಿಯ ಮೋಹನ ಕುಮಾರ್ ಯಾನೆ ಮೋನಿ(27) ಹಾಗೂ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ನರೇದ್ರ ಬಾಬು ಯಾನೆ ಬಾಬು(27) ಎಂಬವರನ್ನು ರಾತ್ರಿ ವೇಳೆ ಅರೆಶಿರೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸಿದ ಮೂರು ಲಕ್ಷ ವೌಲ್ಯದ ಇನ್ನೋವಾ ಕಾರು, ಕಬ್ಬಿಣದ ರಾಡು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಾದ ಚಂದ್ರ ಕುಮಾರ ಯಾನೆ ಜಾಂಟಿ, ಜಾನಿ, ಸಿದ್ಧ, ನಾಗೇಶ ಹಾಗೂ ದರೋಡೆ ಕೃತ್ಯಕ್ಕೆ ಸಹಕರಿಸಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಬಾಲಕೃಷ್ಣ ಕೆ.ಟಿ. ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ನಿರ್ದೇಶನದಂತೆ ಕುಂದಾಪುರ ಪೊಲೀಸ್ ಉಪಾ ಧೀಕ್ಷಕ ಪ್ರವೀಣ್ ನಾಯಕ್ ಮತ್ತು ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್ ಮಾರ್ಗದರ್ಶನದಲ್ಲಿ ಕೊಲ್ಲೂರು ಠಾಣಾಧಿಕಾರಿ ಶೇಖರ ಮತ್ತು ಸಿಬ್ಬಂದಿಗಳಾದ ಅಶೋಕ್ ಕುಮಾರ್, ನವೀನ ಕುಮಾರ್, ನವೀನ, ನಾಗರಾಜ ಈ ಕಾರ್ಯಾಚರಣೆ ನಡೆಸಿದ್ದಾರೆ.