×
Ad

ಮಂಗಳೂರು:ಕಳವು ಆರೋಪಿಗಳ ಬಂಧನ - 1.5 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2016-10-21 22:08 IST

ಮಂಗಳೂರು, ಅ. 21: ಕಳವು ಆರೋಪಿಗಳಿಬ್ಬರನ್ನು ಬಂಧಿಸಿರುವ ಪಾಂಡೇಶ್ವರ ಠಾಣಾ ಪೊಲೀಸರು ಆರೋಪಿಗಳಿಂದ ಕಳವು ಮಾಡಿದ 1.5 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ತಮಿಳುನಾಡಿನ ಸೇಲಂ ಕಲ್ಲುಕೊಚ್ಚಿ ನಿವಾಸಿ ಶ್ರೀನಿವಾಸ (19) ಮತ್ತು ಸುಳ್ಯ ಅಜ್ಜಾವರ ಗ್ರಾಮದ ಪೇರಾಲು ಅಮೈ ಮನೆ ಲಕ್ಷ್ಮಣ ಗೌಡ (19) ಎಂದು ಗುರುತಿಸಲಾಗಿದೆ.

 ಇವರಿಂದ 90 ಸಾವಿರ ರೂ.ವೌಲ್ಯದ 32 ಗ್ರಾಂ ತೂಕದ ಚಿನ್ನದ ಸರ, 55 ಸಾವಿರ ರೂ.ವೌಲ್ಯದ ಲ್ಯಾಪ್‌ಟಾಪ್, 5 ಸಾವಿರ ರೂ. ವೌಲ್ಯದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

 ಅ.26 ರಂದು ಎಮ್ಮೆಕೆರೆ ಅಬ್ದುಲ್ ಫಾರೂಕ್ ಅವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆರೋಪಿಗಳು ಹಿಂದಿನ ಕಿಟಕಿಯ ಸರಳು ಮುರಿದು ಒಳ ನುಗ್ಗಿ ಕಪಾಟಿನಲ್ಲಿಟ್ಟಿದ್ದ 90 ಸಾವಿರ ರೂ. ವೌಲ್ಯದ 32 ಗ್ರಾಂ ಚಿನ್ನದ ಸರ ಕಳವು ಮಾಡಿದ್ದರು. ಅಲ್ಲದೆ ಫಳ್ನೀರ್‌ನಲ್ಲಿ ಮನೆಯೊಂದರಿಂದ 55 ಸಾವಿರ ರೂ.ವೌಲ್ಯದ ಲ್ಯಾಪ್‌ಟಾಪ್, 5 ಸಾವಿರ ರೂ. ವೌಲ್ಯದ ಮೊಬೈಲ್ ಕಳವು ಮಾಡಿದ್ದರು. ಈ ಎರಡೂ ಪ್ರಕರಣಗಳು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.

ಶುಕ್ರವಾರ ಮಧ್ಯಾಹ್ನ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮೋರ್ಗನ್ಸ್‌ಗೇಟ್ ಭಗಿಣಿ ಸಮಾಜದ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News