ಟ್ರಾಫಿಕ್ ಸ್ವಯಂಸೇವಕ ಇನ್ನು ಟ್ರಾಫಿಕ್ ವಾರ್ಡನ್!

Update: 2016-10-21 18:29 GMT

ಬಂಟ್ವಾಳ, ಅ.21: ಬಿ.ಸಿ.ರೋಡಿನ ಕೈಕಂಬದಲ್ಲಿ ಸ್ವಯಂಪ್ರೇರಿತ ರಾಗಿ ಟ್ರಾಫಿಕ್ ಸೇವೆ ನೀಡುವ ಡಿ.ಎ.ರಹ್ಮಾನ್ ಪಟೇಲ್‌ರನ್ನು ಜಿಲ್ಲಾ ಪೊಲೀಸ್ ಇಲಾಖೆಯು ‘ಮಂಗಳೂರು ಸಿಟಿ ಟ್ರಾಫಿಕ್ ವಾರ್ಡನ್’ ಆಗಿ ನೇಮಕಗೊಳಿಸಿದೆ.

ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದಲ್ಲಿ ವಾಸ್ತವ್ಯವಿರುವ 58 ವರ್ಷದ ರಹ್ಮಾನ್ ಪಟೇಲ್ ಬಿಳಿ ಅಂಗಿ, ಖಾಕಿ ಪ್ಯಾಂಟ್ ಧರಿಸಿ ತಲೆ ಮೇಲೊಂದು ಟೋಪಿ, ಕೈಯಲ್ಲೊಂದು ಸೀಟಿ ಹಿಡಿದು ರಸ್ತೆ ಮಧ್ಯೆ ನಿಂತರೆ ಟ್ರಾಫಿಕ್ ಜಾಮ್ ಸಮಸ್ಯೆಯೇ ಇಲ್ಲ.

ಬಿ.ಸಿ.ರೋಡ್ ಖಾಸಗಿ ಡ್ರೈವಿಂಗ್ ಶಾಲೆಯೊಂದರ ತರಬೇತುದಾರರಾಗಿರುವ ಇವರು ಬಿಡುವು ಸಿಕ್ಕರೆ ಬಿ.ಸಿ.ರೋಡ್ ಮೇಲ್ಸೇತುವೆಯ ಕೆಳಭಾಗದಲ್ಲಿ ನಿಂತು ಟ್ರಾಫಿಕ್ ಸೇವೆ ನೀಡುತ್ತಾರೆ. ತರಬೇತಿ ಮುಗಿದು ಸಂಜೆ 5ರಿಂದ 7ರವರೆಗೆ ಕೈಕಂಬ ವೃತ್ತದಲ್ಲಿ ಸೇವೆ ಇವರ ಹವ್ಯಾಸ. ಪೊಳಲಿ ರಸ್ತೆ ಸಂಪರ್ಕ ಪಡೆಯುವ ಕೈಕಂಬ ಸದಾ ಟ್ರಾಫಿಕ್ ಸಮಸ್ಯೆಯಿಂದ ಕೂಡಿರುತ್ತದೆ. ಸಂಜೆಯಾಗುತ್ತಿದ್ದಂತೆ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಬಿ.ಸಿ.ರೋಡ್ ಕೂಡಾ ಇದಕ್ಕೆ ಹೊರತಲ್ಲ. ಕೆಲವು ವರ್ಷಗಳ ಹಿಂದೆ ಬಂಟ್ವಾಳ ಟ್ರಾಫಿಕ್ ಠಾಣೆ ಅಸ್ತಿತ್ವಕ್ಕೆ ಬಂದಿತ್ತಾದರೂ ಸಿಬ್ಬಂದಿಯ ಕೊರತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ರಹ್ಮಾನ್ ಪಟೇಲ್‌ರ ಟ್ರಾಫಿಕ್ ಸೇವೆ ಪೊಲೀಸ್ ಇಲಾಖೆಗೂ ಸಾಕಷ್ಟು ಅನುಕೂಲಕರವಾಗಿದೆ.

ರಹ್ಮಾನ್ ಪಟೇಲ್‌ರ ಈ ಹವ್ಯಾಸವನ್ನು ಕಂಡು ಬಂಟ್ವಾಳ ಪೊಲೀಸ್ ಇಲಾಖೆ ಈ ಹಿಂದೆ ಅವರಿಗೆ ಟ್ರಾಫಿಕ್ ಸೇವೆ ನೀಡಲು ಲಿಖಿತ ಅನುಮತಿ ನೀಡಿತ್ತು. ಇದೀಗ ಜಿಲ್ಲಾ ಪೊಲೀಸ್ ಇಲಾಖೆ ‘ಮಂಗಳೂರು ಸಿಟಿ ಟ್ರಾಫಿಕ್ ವಾರ್ಡನ್’ ಆಗಿ ನೇಮಿಸಿದೆ. ಟ್ರಾಫಿಕ್ ವಾರ್ಡನ್ ಆಗಿ ನೇಮಕಗೊಂಡಿರುವ ಐಡಿ ಕಾರ್ಡ್ ಕೂಡ ಇವರಿಗೆ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News