ಕೊಣಾಜೆ: ದುಷ್ಕರ್ಮಿಗಳಿಂದ ಯುವಕನ ಕೊಲೆಗೆ ಯತ್ನ

Update: 2016-10-22 13:58 GMT

ಕೊಣಾಜೆ, ಅ.22: ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಯುವಕನೊಬ್ಬನಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಶನಿವಾರ ಮುಂಜಾನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಸಮೀಪ ನಡೆದಿದ್ದು, ಗಂಭೀರ ಗಾಯಗೊಂಡಿರುವ ಯುವಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ದಾಖಲಾಗಿದ್ದಾನೆ.

ಮಾರಣಾಂತಿಕ ಹಲ್ಲೆಗೊಳಗಾದ ಯುವಕನನ್ನು ಪಜೀರು ಗ್ರಾಮದ ಸುದರ್ಶನ ನಗರದ ಉಮೇಶ್ ಎಂಬವರ ಪುತ್ರ ಕಾರ್ತಿಕ್ ರಾಜ್(27) ಎಂದು ಗುರುತಿಸಲಾಗಿದೆ.

ಕಾರ್ತಿಕ್ ರಾಜ್ ದಿನಾ ಮುಂಜಾನೆ ಪಜೀರು ತಮ್ಮ ಮನೆಯಿಂದ ದೇರಳಕಟ್ಟೆಯವರೆಗೆ ವಾಕಿಂಗ್ ಹೋಗಿ ಅಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮುಗಿಸಿ ಬಳಿಕ ಮನೆಗೆ ವಾಪಸ್ಸಾಗುತ್ತಿದ್ದರು. ಎಂದಿನಂತೆ ಶನಿವಾರ ಮುಂಜಾನೆ ಕೂಡಾ 5:15ರ ವೇಳೆಗೆ ಕೊಣಾಜೆ ಬಳಿಯ ಗಣೇಶ್ ಮಹಲ್ ಪ್ರದೇಶದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇದರಿಂದ ತಲೆಗೆ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಅದೇ ರಸ್ತೆಯಲ್ಲಿ ವಾಹನದ ಚಾಲಕೊಬ್ಬರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಬಂದು ಅದೇ ಕಾರಿನಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಹನ ಆಕ್ಸಿಡೆಂಟ್ ಆಗಿ ಹಿಟ್ ಆಂಡ್ ರನ್ ಆಗಿರಬಹುದೆಂದು ಪೊಲೀಸರು ಅಂದಾಜಿಸಿದ್ದರು. ಆದರೆ ಬಳಿಕ ಇದು ದುಷ್ಕರ್ಮಿಗಳು ಕೊಲೆ ನಡೆಸಲು ಯತ್ನಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಕೊಣಾಜೆ ಠಾಣಾ ಇನ್‌ಸ್ಪೆಕ್ಟರ್ ಅಶೋಕ್ ಹಾಗೂ ಎಸ್ಸೈ ಸುಕುಮಾರನ್ ಅವರು ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದು, ಘಟನಾ ಸ್ಥಳಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳಾದ ಡಿಸಿಪಿ ಶಾಂತರಾಜು, ಎಸಿಪಿ ಶೃತಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ತಿಕ್ ರಾಜ್ ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದ ಯುವಕನಾಗಿದ್ದು ಯಾರಲ್ಲಿಯೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಅವರು ಮಂಗಳೂರಿನಲ್ಲಿ ಕೆನರಾ ಸ್ವಿಂಗ್ ಎಂಬ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಕೆಲಸಕ್ಕೆ ಸೇರಿಕೊಂಡಿದ್ದರು. ಸರಳ ವ್ಯಕ್ತಿತ್ವದ ಕಾರ್ತಿಕ್‌ಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ದುಷ್ಕರ್ಮಿಗಳ ಟಾರ್ಗೆಟ್ ತಪ್ಪಿತೇ?

ಸಾಮಾನ್ಯವಾಗಿ ಅಸೈಗೋಳಿ ಹಾಗೂ ಕೊಣಾಜೆ ಪರಿಸರದ ಹೆಚ್ಚಿನವರು ಅಸೈಗೋಳಿ ಕೊಣಾಜೆ ರಸ್ತೆಯಲ್ಲಿ ವಾಕಿಂಗ್, ಜಾಗಿಂಗ್ ಹೋಗುತ್ತಿದ್ದಾರೆ. ಅಲ್ಲದೆ ಕೊಣಾಜೆ ಠಾಣೆ ಕೂಡಾ ಇದೇ ರಸ್ತೆಯಲ್ಲಿರುವುದರಿಂದ ಯಾವುದೇ ಆತಂಕವಿಲ್ಲದೆ ಈ ಮುಂಜಾನೆ ನಡೆದಾಡಿಕೊಂಡಿದ್ದರು. ಆದರೆ ಇದೀಗ ಇದೇ ರಸ್ತೆಯಲ್ಲಿ ಘಟನೆ ಸಂಭವಿಸಿರುವುದು ಭಯದ ವಾತಾವಾರಣ ನಿರ್ಮಿಸಿದೆ. ಅಲ್ಲದೆ ದುಷ್ಕರ್ಮಿಗಳು ಬೇರೇ ಯಾರನ್ನೋ ಟಾರ್ಗೆಟ್ ಮಾಡಿಕೊಂಡು ಗುರಿ ತಪ್ಪಿ ಕಾರ್ತಿಕ್ ಮೇಲೆ ದಾಳಿ ನಡೆಸಿರಬಹುದೇ ಎಂಬುದರ ಬಗ್ಗೆಯೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News