‘ಕನಕನಡೆ’ಗೆ ಅನುಮತಿ ನಿರಾಕರಣೆ

Update: 2016-10-22 16:13 GMT

ಉಡುಪಿ, ಅ.22: ಉಡುಪಿಯ ಯುವ ಬ್ರಿಗೇಡ್ ಸಂಘಟನೆಯು ಅ.23ರಂದು ಉಡುಪಿಯಲ್ಲಿ ನಡೆಸಲು ಉದ್ದೇಶಿಸಿದ್ದ ‘ಕನಕ ನಡೆ’ ಸ್ವಚ್ಛತಾ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.

ಬೆಳಗ್ಗೆ 8ಗಂಟೆಯಿಂದ ಅಪರಾಹ್ನ 1:00ಗಂಟೆಯವರೆಗೆ ಉಡುಪಿ ಶ್ರೀಕೃಷ್ಣ ಮಠವನ್ನು ಸಂಪರ್ಕಿಸುವ ಬಡಗುಪೇಟೆ, ತೆಂಕಪೇಟೆ, ಕನಕದಾಸ ರಸ್ತೆ, ವಾದಿರಾಜ ರಸ್ತೆ, ಕಲ್ಸಂಕದಿಂದ ಪಾರ್ಕಿಂಗ್ ಪ್ರದೇಶವನ್ನು ತಲುಪುವ ರಸ್ತೆ, ಅದಮಾರು ಮಠದ ಓಣಿಗಳಲ್ಲಿ ಸಂಘಟನೆಯ ಸುಮಾರು 500 ಮಂದಿ ಕಾರ್ಯಕರ್ತರು ಸ್ವಚ್ಛತಾ ಶ್ರಮದಾನವನ್ನು ನಡೆಸಲು ಅನುಮತಿ ಕೋರಿ ಯುವ ಬ್ರಿಗೇಡ್ ಸಂಘಟನೆ ಅ.20ರಂದು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿತ್ತು.
ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ ವರದಿಯಲ್ಲಿ ಯುವ ಬ್ರಿಗೇಡ್‌ನವರು ಕನಕ ನಡೆ ಸ್ವಚ್ಛತಾ ಕಾರ್ಯಕ್ರಮ ನಡೆಸುವ ಸಮಯದಲ್ಲಿ ಎಡಪಂಥೀಯ ಸಂಘಟನೆಗಳು ಉಡುಪಿ ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವ ಕುರಿತು ಮಾಹಿತಿ ಬಂದಿದ್ದು, ಈ ಸಂದರ್ಭ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗುವ ಸಾಧ್ಯತೆಗಳಿರುವುದರಿಂದ ಹಾಗೂ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಸ್ಥಳದಲ್ಲಿ ಯುವ ಬ್ರಿಗೇಡ್‌ನವರ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂಬುದಾಗಿ ಶಿಫಾರಸ್ಸು ಮಾಡಲಾಗಿದೆ.

 ಅದೇ ರೀತಿ ಉಡುಪಿ ನಗರಸಭೆ ಪೌರಾಯುಕ್ತರು ನೀಡಿದ ವರದಿಯಲ್ಲಿ ಯುವ ಬ್ರಿಗೇಡ್‌ನವರು ಸ್ವಚ್ಛತಾ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವ ಸ್ಥಳಗಳಲ್ಲಿ ನಗರಸಭೆಯ ವತಿಯಿಂದ ಪ್ರತಿದಿನ ಸ್ವಚ್ಛತಾ ಕಾರ್ಯವನ್ನು ನಿರ್ವ ಹಿಸಲಾಗುತ್ತಿದೆ ಎಂಬುದಾಗಿ ಉಲ್ಲೇಖಿಸಲಾಗಿದೆ.

ಈ ಎರಡು ವರದಿಗಳ ಅಂಶಗಳನ್ನು ಪರಿಗಣಿಸಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಾರ್ವಜನಿಕ ಆಸ್ತಿ ಹಾಗೂ ಪ್ರಾಣ ರಕ್ಷಿಸುವ ದೃಷ್ಠಿಯಿಂದ ಹಾಗೂ ಈ ಸ್ಥಳಗಳಲ್ಲಿ ನಗರಸಭೆಯಿಂದ ಪ್ರತಿದಿನ ಸ್ವಚ್ಛತೆ ಮಾಡುತ್ತಿರುವುದರಿಂದ ಶ್ರೀಕೃಷ್ಣ ಮಠವನ್ನು ಸಂಪರ್ಕಿಸುವ ಬಡಗುಪೇಟೆ, ತೆಂಕಪೇಟೆ, ಕನಕದಾಸ ರಸ್ತೆ, ವಾದಿರಾಜ ರಸ್ತೆ, ಕಲ್ಸಂಕದಿಂದ ಪಾರ್ಕಿಂಗ್ ಪ್ರದೇಶವನ್ನು ತಲುಪುವ ರಸ್ತೆ, ಅದಮಾರು ಮಠದ ಓಣಿಗಳಲ್ಲಿ ಯುವ ಬ್ರಿಗೇಡ್ ನಡೆಸುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮ ನಡೆಸಿದರೆ ಕಾನೂನು ಕ್ರಮ: ಎಸ್ಪಿ

ನಮೋ ಬ್ರಿಗೇಡ್ ಸಂಘಟನೆಯ ಕನಕ ನಡೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ನಗರ ದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಸಾರ್ವಜನಿಕರ ಸ್ಥಳದಲ್ಲಿ ಕನಕ ನಡೆ ಕಾರ್ಯಕ್ರಮ ನಡೆಸಿದರೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಈಗಾಗಲೇ ಜಿಲ್ಲಾಡಳಿತ ಉಲ್ಲೇಖ ಮಾಡಿದ ಸ್ಥಳಗಳಲ್ಲಿ ಮಾತ್ರವಲ್ಲದೆ ನಗರದ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಅವ ಕಾಶ ನೀಡುವುದಿಲ್ಲ. ರಾಜಾಂಗಣದ ಪಾರ್ಕಿಂಗ್ ಸ್ಥಳದಲ್ಲಿಯೂ ಕಾರ್ಯ ಕ್ರಮ ನಡೆಸಲು ಅನುಮತಿ ಇಲ್ಲ. ಅದು ಬಿಟ್ಟು ಮಠದೊಳಗೆ ಅವರ ಖಾಸಗಿ ಸ್ಥಳದಲ್ಲಿ ಮಾಡಿದರೆ ನಾವು ಏನು ಮಾಡಲು ಆಗುವುದಿಲ್ಲ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದ್ದು, ಆರು ಕೆಎಸ್‌ಆರ್‌ಪಿ, ಏಳು ಡಿಎಆರ್ ತುಕಡಿ, 450 ಪೊಲೀಸ್ ಕಾನ್‌ಸ್ಟೇಬಲ್, 13ಪೊಲೀಸ್ ನಿರೀಕ್ಷಕರು, 25ಉಪನಿರೀಕ್ಷಕರು, ಮೂವರು ಡಿವೈಎಸ್ಪಿ, 100 ಹೋಮ್ ಗಾರ್ಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News