ಪಡುಬಿದ್ರೆ: ಉಪನಿರೀಕ್ಷಕ ಅಜ್ಮತ್ ಅಲಿಗೆ ಬೀಳ್ಕೊಡುಗೆ
ಪಡುಬಿದ್ರೆ, ಅ.22: ಪಡುಬಿದ್ರೆ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಮೂರುವರೆ ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಇದೀಗ ಮಂಗಳೂರು ಡಿಸಿಆರ್‌ಇ ನಿರೀಕ್ಷಕರಾಗಿ ಪದೋನ್ನತಿಗೊಂಡ ಅಝ್ಮತ್ ಅಲಿಯವರಿಗೆ ಪಡುಬಿದ್ರೆ ನಾಗರಿಕರ ವತಿಯಿಂದ ಬೀಳ್ಕೊಡುಗೆ ಸಮಾರಂಭ ಪಡುಬಿದ್ರೆ ಖಾಸಗಿ ಹೋಟೆಲ್‌ನ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
ಸಮಾರಂಭದಲ್ಲಿ ಪಡುಬಿದ್ರೆ ಠಾಣಾ ವ್ಯಾಪ್ತಿಯ ಹೆಜಮಾಡಿ, ಪಡುಬಿದ್ರೆ, ಪಲಿಮಾರು, ಮುದರಂಗಡಿ, ಎರ್ಮಾಳು, ಉಚ್ಚಿಲ, ಎಲ್ಲೂರಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ವತಿಯಿಂದ ಅಜ್ಮತ್ ಆಲಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಅಝ್ಮತ್ ಅಲಿ, ಸಾರ್ವಜನಿಕ ಸೇವೆಗೆ ಪೊಲೀಸ್ ಇಲಾಖೆ ಅತ್ಯುತ್ತಮ. ಸಮಾಜ ಸೇವೆಯನ್ನು ಚಾಚೂತಪ್ಪದೆ ನಿರ್ವಹಿಸುವುದು ಪೊಲೀಸ್ ಇಲಾಖೆಯ ಕಾರ್ಯಭಾಗವಾಗಿದೆ. ಸಮಾಜಮುಖಿ ಕೆಲಸ ನಿರ್ವಹಿಸಲು ಮನಸ್ಸು ಶುದ್ಧ ಇರಬೇಕು. ಶುದ್ಧ ಮನಸ್ಸಿನೊಂದಿಗೆ ಉತ್ತಮ ಕೆಲಸ ಮಾಡಬಹುದು. ಸಿಬ್ಬಂದಿ ಹಾಗೂ ಮೇಲಧಿಕಾರಿಗಳ ಅತ್ಯುತ್ತಮ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಿದ ನೆಮ್ಮದಿ ಇದೆ ಎಂದರು.
ಈ ಸಂದರ್ಭ ನನ್ನ ತಂದೆ, ತಾಯಿ ಹಾಗೂ ಕುಟುಂಬಿಕರ ಮಾರ್ಗದರ್ಶನ ಹಾಗೂ ಪ್ರೋತ್ಸಾಹವೇ ನನ್ನ ಉನ್ನತಿಗೆ ಹಾಗೂ ಸಾಧನೆಗೆ ಕಾರಣ. ತಮ್ಮ ಪೊಲೀಸ್ ವೃತ್ತಿ ಬದುಕಿಗೆ ಪ್ರೇರಣೆಯಾದ ಪೊಲೀಸ್ ಅಧಿಕಾರಿ ಅಮಾನುಲ್ಲಾ ಅವರ ಪ್ರೇರಣೆಯಿಂದ ಪೊಲೀಸ್ ಅಧಿಕಾರಿಯಾದೆ ಎಂದು ನೆನಪಿಸಿಕೊಂಡರು.
ಈ ಸಂದರ್ಭ ಮಾತನಾಡಿದ ಸುನಿಲ್ ನಾಯಕ್, ನನ್ನ ಸೇವೆಯ ಸಂದಭರ್ ಕಾಪು ವ್ಯಾಪ್ತಿಯಲ್ಲಿ ಪಡುಬಿದ್ರೆ ಪೊಲೀಸ್ ಠಾಣೆ ಅತ್ಯುತ್ತಮ ಠಾಣೆ ಎಂದು ಪ್ರಸಿದ್ಧಿ ಪಡೆದಿತ್ತು. ಅದಕ್ಕೆ ಅಝ್ಮತ್ ಆಲಿಯವರ ಕಾರಣ. ಇಲ್ಲಿ ಠಾಣೆಯಲ್ಲಿ ಸಂಘಟಿತರಾಗಿ ಕೆಲಸ ಮಾಡಿದ ಕಾರಣ ಹಲವು ಹಲವು ಕ್ಲಿಷ್ಟಕರ ಪ್ರಕರಣ ಭೇದಿಸಲು ಸಾಧ್ಯವಾಗಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ನಿರೀಕ್ಷಕ ಜಾಯ್ ಅಂಥೋನಿ ಮಾತನಾಡಿ, ನಿಷ್ಠಾವಂತ ಕೆಲಸಕ್ಕೆ ಪ್ರತಿಫಲ ಇದೆ ಅನ್ನೋದಕ್ಕೆ ಇಲ್ಲಿ ಸೇರಿದ ಜನರ ಪ್ರೀತಿಯೇ ಸಾಕ್ಷಿ. ಅಝ್ಮತ್ ಆಲಿಯವರು ಇನ್ನಷ್ಟು ಉನ್ನತ ಹುದ್ದೆಯನ್ನು ಅಲಂಕರಿಸಲಿ ಎಂದು ಹಾರೈಸಿದರು.
ಇದೇ ವೇಳೆ ಕಾಪು ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಮಂಗಳೂರು ಸಿಸಿಬಿಗೆ ವರ್ಗಾವಣೆಗೊಂಡ ಸುನಿಲ್ ನಾಯಕ್, ಪಡುಬಿದ್ರೆ ಠಾಣೆಯಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹಾಗೂ ವರ್ಗಾವಣೆಗೊಂಡು ವಿವಿಧ ಠಾಣೆಗಳಿಗೆ ತೆರಳುತ್ತಿರುವ ರಘುವೀರ್, ರವಿಕುಮಾರ್, ವಿಶ್ವಜಿತ್, ನಾಗೇಶ್, ಜೀವನ್, ವಿಶಾಲಾಕ್ಷಿಯವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಪಡುಬಿದ್ರೆ ಪ್ರಭಾರ ಠಾಣಾಧಿಕಾರಿ ಬಸಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಎಸ್ಸೈ ರಮೇಶ್ ಸ್ವಾಗತಿಸಿ ಪ್ರಸ್ತಾವಿಸಿದರು. ಸಂತೋಷ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.